ಅವಧೂತ ಶ್ರೀ ಶುಖಮುನಿಸ್ವಾಮಿಗಳ ಸಂಭ್ರಮದ ರಥೋತ್ಸವ

 

ಕೃಷಿ ಪ್ರಿಯ ನ್ಯೂಸ್ |

ಸಂಗಮೇಶ ಮುಶಿಗೇರಿ

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಆರಾಧ್ಯ ದೈವ ದೋಟಿಹಾಳ ಅವಧೂತ ಶ್ರೀ ಶುಖಮುನಿಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸಹಸ್ರಾರು ಭಕ್ತರ ಮಧ್ಯೆ ಮಹಾರಥೋತ್ಸವ ಸಂಭ್ರಮ ಹಾಗೂ ಸಡಗರದಿಂದ ಜರುಗಿತು..!

ಸಂಜೆ ಆರು ಗಂಟೆಗೆ ಮಠಾಧೀಶರ ಸಮ್ಮುಖದಲ್ಲಿ ತಹಸೀಲ್ದಾರ್ ರಾಘವೇಂದ್ರರಾವ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಅವಧೂತ ಶುಖಮುನಿಸ್ವಾಮಿಗಳ ನಾಮ ಜಪ ಜಯಘೋಷಣೆಗಳೊಂದಿಗೆ ರಥಬೀದಿಯಲ್ಲಿ ಸಾಗಿದ ತೇರಿಗೆ ದೋಟಿಹಾಳ ಸೇರಿದಂತೆ ತಾಲೂಕಿನ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಹಾಗೂ ನೂತನ ದಂಪತಿಗಳು ಭಕ್ತಿ ಭಾವದಿಂದ ಉತ್ತತ್ತಿ ಬಾಳೆ ಹಣ್ಣು ಎಸೆಯುವ ಮೂಲಕ ರಥೋತ್ಸವ ಕಣ್ತುಂಬಿಕೊಂಡರು.

ಇದಕ್ಕೂ ಮುನ್ನ ಶುಖಮುನಿಸ್ವಾಮಿಗಳ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕಳೆದೊಂದು ವಾರದಿಂದ ಕೇಸೂರು ವ, ದೋಟಿಹಾಳ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದ ಶುಖಮುನಿಸ್ವಾಮಿಗಳ ಪಲ್ಲಕ್ಕಿ ಮೆರವಣಿಗೆ ಇಂದು ಸಂಪನ್ನಗೊಂಡಿತು..!!