ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹೈದರಾಬಾದ್ ಕರ್ನಾಟಕದ ಗಡಿ ಭಾಗವಾಗಿರುವ ಕುಷ್ಟಗಿ ತಾಲೂಕಿನ ಹನುಮನಾಳ ಕಂದಾಯ ಹೋಬಳಿ ಪ್ರದೇಶವನ್ನು ಅಧಿಕಾರ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಹಿತ ದೃಷ್ಟಿಯಿಂದ ತಾಲೂಕಾ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಬೇಡಿಕೆ ಈ ಭಾಗದಲ್ಲಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ..!
ಭೌಗೋಳಿಕವಾಗಿ ಮುಂಬೈ ಕರ್ನಾಟಕದ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಮಧ್ಯದಲ್ಲಿ ಸಿಲುಕಿಕೊಂಡಿರುವ ಹನುಮನಾಳ ಕಂದಾಯ ಹೋಬಳಿ ವ್ಯಾಪ್ತಿ ಪ್ರದೇಶ ಇಲ್ಲಿಯವರೆಗೆ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಸಾಕಷ್ಟು ಹಿಂದುಳಿದಿರುವಂತ ಪ್ರದೇಶವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಡೀ ಕಂದಾಯ ಹೋಬಳಿ ಪ್ರದೇಶದಲ್ಲಿ ಒಂದೇ ಒಂದು ವಸತಿ ಶಾಲೆ ಇಲ್ಲ..! ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಭಾಗ ಸಂಪೂರ್ಣ ಹಿಂದುಳಿಯಲು ಕಾರಣವಾಗಿದೆ. ಹನುಮನಾಳ ಕಂದಾಯ ಹೋಬಳಿ ವಾಪ್ತಿಯ ಗ್ರಾಮಗಳು ಕುಷ್ಟಗಿ ತಾಲೂಕಾ ಕೇಂದ್ರದಿಂದ 60 ಕಿ.ಮೀ ನಷ್ಟು ದೂರದಲ್ಲಿವೆ. ತಾಲೂಕಾ ಕೇಂದ್ರ ತಲುಪಬೇಕಾದರೇ.. ಒಂದು ದಿನ ಸಮಯ ಬೇಕಾಗಿದೆ. ಎರಡು ಮೂರು ಕಡೆ ವಾಹನಗಳನ್ನು ಇಳಿದು ಹತ್ತ ಬೇಕಾಗಿರುವ ಪರಿಸ್ಥಿತಿ ಇಲ್ಲಿನವರಿಗೆ ಸಾಮಾನ್ಯವಾಗಿಬಿಟ್ಟಿದೆ. ಜಿಲ್ಲಾ ಕೇಂದ್ರ ಕೊಪ್ಪಳ 115 ಕಿ.ಮೀಕ್ಕೂ ದೂರದಲ್ಲಿದೆ. ಹಿಂದಿನ ದಿನ ಕೊಪ್ಪಳದಲ್ಲಿ ವಸತಿಯಾಗಿ ಸರಕಾರಿ ಕೆಲಸಗಳನ್ನು ಪೂರೈಸಿಕೊಂಡು ಬರುವುದು ಈ ಭಾಗದವರಿಗೆ ಸಾಮಾನ್ಯವಾಗಿದೆ. 42 ಗ್ರಾಮಗಳನ್ನು ಹೊಂದಿರುವ ಕಂದಾಯ ಹೋಬಳಿ ಕೇಂದ್ರ ಸ್ಥಾನ ‘ಹನುಮನಾಳ’ ತಾಲೂಕಾ ಆಗಲೇಬೇಕು ಎಂಬುದು ಇಲ್ಲಿನವರ ಬಹು ವರ್ಷಗಳ ಒತ್ತಾಸೆಯಾಗಿದೆ..!!
ಅಭಿವೃದ್ಧಿ ಮತ್ತು ಆಡಳಿತ ವಿಕೇಂದ್ರೀಕರಣ ದೃಷ್ಟಿಯಿಂದಾದರು ರಾಜ್ಯದಲ್ಲಿಯೇ ಅತ್ಯಂತ ಸಣ್ಣ ತಾಲೂಕಾ ಎಂತಲಾದರೂ ಹನುಮನಾಳ ಕೇಂದ್ರ ಸ್ಥಾನವನ್ನು ಸರಕಾರ ಘೋಷಿಸಬೇಕಾಗಿದೆ. ಹೋರಾಟ ರೂಪಿಸಲಾಗುವುದು.
– ಚಂದ್ರಶೇಖರ ಉಪ್ಪಿನ, ನ್ಯಾಯವಾದಿ, ಹನುಮನಾಳ.

