ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ರಾಜ್ಯ ಸರಕಾರಿ ನೌಕರರ ವೇತನ ಭತ್ಯೆ ಪರಿಷ್ಕರಣೆಗೆ 7ನೇ ವೇತನ ಆಯೋಗ ಜಾರಿಗೊಳಿಸುವಂತೆ ಆಗ್ರಹಿಸಿ ಮಾ.1ರಿಂದ ಸರಕಾರಿ ನೌಕರರ ಸಂಘದ ಹೋರಾಟಕ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ತಿಳಿಸಿದ್ದಾರೆ..!
ಏಳನೇ ವೇತನ ಆಯೋಗದ ಮದ್ಯಂತರ ವರದಿ ಪಡೆದು 40% ಫಿಟ್ಮೆಂಟ್ ನ್ನು ಜು.1 2022 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು. ರಾಜಸ್ತಾನ,ಛತ್ತೀಸಗಡ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್ ಪಿ ಎಸ್ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಎನ್ ಪಿ ಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಇದರಿಂದ ಲಕ್ಷಾಂತರ ನೌಕರರಿಗೆ ಅನುಕೂಲವಾಗಲಿದೆ. ರಾಜ್ಯ ಸರಕಾರಿ ನೌಕರರು ಹಗಲಿರುಳು ಶ್ರಮಿಸಿದರು ಸಹ ಸರಕಾರ ಮಾತ್ರ ನಮ್ಮ ಸೇವೆಯನ್ನು ಗುರುತಿಸಿ, ಬೇಡಿಕೆ ಈಡೇರಿಸದಿರುವುದು ಬೇಸರ ತರಿಸಿದೆ ಎಂದರು.
ಹೀಗಾಗಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.01ರಿಂದ ರಾಜ್ಯದ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳು ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಅನಿರ್ದಿಷ್ಟಾವಧಿಯವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟ ಮಾಡುವ ನಿರ್ಧಾರದ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಝೂಮ್ ಮೀಟಿಂಗ್ ಮೂಲಕ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯದ ಎಲ್ಲ ಶಿಕ್ಷಕರು ಮಾ.1ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!
ಸುದ್ದಿ ಕೃಪೆ : ದೇವು ಹಲಗೇರಿ
