‘ಕಾಂಗ್ರೆಸ್ ಗೆಲವು’ ಅಭಿಪ್ರಾಯ ಹಂಚಿದ ಶಿಕ್ಷಕನಿಗೆ ನೊಟೀಸ್..!

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : “ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶೇ. ನೂರಕ್ಕೆ 200% ರಷ್ಟು ಸತ್ಯ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಮೊಬೈಲ್ ಗ್ರೂಪ್ ವೊಂದರಲ್ಲಿ ಅಭಿಪ್ರಾಯ ಹಂಚಿಕೊಂಡ ಶಿಕ್ಷಕನಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರಣ ಕೇಳಿ ನೊಟೀಸ್ ನೀಡಿದೆ..!

ಜಿಲ್ಲೆಯ ಕೂಕನೂರು ತಾಲೂಕಿನ ಭಾಣಾಪೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಸೋಮಶೇಖರ ಹರ್ತಿ ಎಂಬುವರು ಇತ್ತೀಚಿಗೆ ‘ರಜತ ವೈಭವ ಕನ್ನಡ ಪ್ರಭ’ ಎಂಬ ವಾಟ್ಸಾಪ್ ಗ್ರೂಪ್ ಗೆ ಕಾಂಗ್ರೆಸ್ ಪಕ್ಷ ಜಯ ಗಳಿಸುವುದು ಮತ್ತು ಅಧಿಕಾರಕ್ಕೆ ಬರುವ ಅಭಿಪ್ರಾಯ ಹೊಂದಿದ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವುದು ಶಿಕ್ಷಕನ ನೊಟೀಸ್ ಗೆ ಮುಖ್ಯ ಕಾರಣವಾಗಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ನಡತೆ (ನಿಯಮಗಳು) 2021 ನಿಯಮ 3 ರ (1) (2) ಮತ್ತು (5) ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿದ ಹಿನ್ನಲೆಯಲ್ಲಿ ಉಪ ನಿರ್ದೇಶಕ ಎಂ.ವಿ.ರಡ್ಡೇರ್ ಅವರು ಮೂರು ದಿನಗಳವೊಳಗಾಗಿ ಲಿಖಿತ ಉತ್ತರಕ್ಕೆ ಕಾರಣ ಕೇಳಿ ನೊಟೀಸ್ ನೀಡಿದ್ದಾರೆ. ಇಲ್ಲವಾದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮ 1957 ರನ್ವಯ ಕ್ರಮ ಕೈಗೊಳ್ಳುವುದಾಗಿ 28-02-2023 ರಂದು ನೀಡಿದ ನೊಟೀಸ್ ನಲ್ಲಿ ಸ್ಪಷ್ಟಪಡಿಸಿದ್ದಾರೆ..!!