ಕೆ.ಶಿವರಾಮ ಕೊಪ್ಪಳದ ಮೊದಲ ಜಿಲ್ಲಾಧಿಕಾರಿ..!

 


ಕೃಷಿ ಪ್ರಿಯ ನ್ಯೂಸ್ |

ಶರಣಪ್ಪ ಕುಂಬಾರ

ಕೊಪ್ಪಳ : “ಕೆ.ಶಿವರಾಮ” ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಆಡಳಿತ ನಡೆಸಿರುವುದು ಜಿಲ್ಲೆಯ ವಿಶೇಷತೆ..!

ಜಿಲ್ಲಾ ಉದಯವಾಗುವ ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲರು ಐಎಎಸ್ ಅಧಿಕಾರಿಯಾಗಿದ್ದ ಕೆ.ಶಿವರಾಮ ಅವರಿಗೆ ಸಾಂಕೇತಿಕವಾಗಿ ಬಹು ದೊಡ್ಡ (ಸ್ಥಳೀಯ ಕಲಾವಿದ ತಯಾರಿಸಿದ) ‘ಕೀ’ವೊಂದನ್ನು ಹಸ್ತಾಂತರಿಸುವ ಮೂಲಕ ಜಿಲ್ಲೆಯ ಆಡಳಿತ ಆರಂಭಿಸಲು ಸೂಚನೆ ನೀಡಿದ ಅಮೃತ ಘಳಿಗೆ ಜಿಲ್ಲೆಯ ಜನರ ಮನಸ್ಸಿನಿಂದ ನೆನಪು ಮರೆಯಾಗಲು ಸಾಧ್ಯವಿಲ್ಲ. ಬಹಳಷ್ಟು ಸ್ಫೂರದ್ರೂಪಿಯಾಗಿದ್ದ ಕೆ.ಶಿವರಾಮ ಅವರು ಹೊಸ ಜಿಲ್ಲೆಯ ಸಮಗ್ರ ಅಭಿವೃದ್ಧಿ ಜವಾಬ್ದಾರಿ ಹೊತ್ತು ಅಧಿಕಾರ ಮುನ್ನಡೆಸಿದ್ದು ಒಂದು ಸವಾಲಾಗಿತ್ತು. ತಾಲೂಕಾ ಕೇಂದ್ರವಾಗಿದ್ದ ಆಗಿನ ಕೊಪ್ಪಳ ಪಟ್ಟಣದಲ್ಲಿ ಸ್ಥಳೀಯ ತಾಲೂಕು ಕಚೇರಿಗಳು ಸೇರಿದಂತೆ ಬಾಡಿಗೆ ಕಟ್ಟಡಗಳಲ್ಲಿ ಜಿಲ್ಲಾ ಮಟ್ಟದ ಕಚೇರಿಗಳನ್ನು ಆರಂಭಿಸಿ, ಇಲ್ಲಿನವರಿಗೆ ಆಡಳಿತ ನೀಡಿದ್ದು ಜಿಲ್ಲೆಯ ಜನರು ಎಂದಿಗೂ ಮರೆಯುವಂತಿಲ್ಲ. ಇಂತಹ ಮೊದಲ ಜಿಲ್ಲಾಧಿಕಾರಿ ಕೆ.ಶಿವರಾಮ ಅವರಿಗೆ ಕೊಪ್ಪಳ ಜಿಲ್ಲೆ ‘ರಜತ ಮಹೋತ್ಸವ’ ಆಚರಿಸಿಕೊಳ್ಳುವ ಈ ಶುಭ ಸಂದರ್ಭದಲ್ಲಿ ಅವರ ಸೇವೆ ನೆನೆಯುವ ಮೂಲಕ ಅವರಿಗೆ ನಮ್ಮೊಂದು ಸಲಾಂ..!!

ಚಲನಚಿತ್ರ ನಟ : ಕೆ.ಶಿವರಾಮ ಅವರು ಕೇವಲ ಜಿಲ್ಲಾಧಿಕಾರಿ ಅಲ್ಲದೆ, ಅವರೊಬ್ಬ ಅಪ್ಪಟ ಕನ್ನಡ ಚಲನಚಿತ್ರ ಕಲಾವಿದರಾಗಿದ್ದರು. ಕೊಪ್ಪಳ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವ ಹೊತ್ತಿಗಾಗಲೇ ಇವರ (ಹೀರೋ) ನಾಯಕತ್ವದಲ್ಲಿ ‘ಬಾ ನಲ್ಲೆ ಮಧುಚಂದ್ರಕೆ’ ಮತ್ತು ‘ವಸಂತ ಕಾವ್ಯ’ ಎಂಬ ಎರಡು ಚಲನಚಿತ್ರಗಳು ಆಗಲೇ ತೆರೆಕಂಡಿದ್ದವು. ರಾಜ್ಯ ಸೇರಿದಂತೆ ದೇಶದ ತುಂಬೆಲ್ಲಾ ಸಾಕಷ್ಟು ಹೆಸರು ಕೂಡಾ ಮಾಡಿದ್ದರು. ಜಿಲ್ಲಾ ಉದಯ ಸೇರಿದಂತೆ ಬಹುತೇಕ ಕಾರ್ಯಕ್ರಮಗಳಲ್ಲಿ ಇವರನ್ನು ನೋಡುವುದಕ್ಕಾಗಿಯೇ ಸಾಕಷ್ಟು ಜನ ಚಲನಚಿತ್ರ ಪ್ರಿಯರು ಸೇರುತ್ತಿದ್ದರು. ಶಿವರಾಮ ಅವರು ಕೂಡಾ ತಾವು ಜಿಲ್ಲಾಧಿಕಾರಿ ಅಂತ ತಿಳಿದು ಯಾವುದೇ ಹಮ್ಮು ಬಿಮ್ಮು ತೊರಿಸದೆ ಸಾಮಾನ್ಯರ ಜೊತೆಗೆ ಸಾಮಾನ್ಯರಾಗಿ ಬೆರೆತು, ಜಿಲ್ಲೆಯಲ್ಲಿ ಅಧಿಕಾರ ನಡೆಸಿದ್ದು ಇತಿಹಾಸ ಪುಟಗಳಲ್ಲಿ ಅಚ್ಚಳಿಯಾಗಿ ಉಳಿದಿದೆ.

ಕನ್ನಡ ಭಾಷೆಯಲ್ಲಿ ಐಎಎಸ್ ಪಾಸಾದ ಮೊದಲಿಗ : ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆಯಲ್ಲಿ ಪಾಸಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಕೆ.ಶಿವರಾಮ್ ಅವರು ಪಾತ್ರರಾಗಿದ್ದು ವಿಶೇಷತೆಗಳಲ್ಲೊಂದು ವಿಶೇಷ. ಅಪ್ಪಟ ಕನ್ನಡಿಗ ಜಿಲ್ಲಾಧಿಕಾರಿಯನ್ನು ಅದು ಮೊದಲನೇ ಜಿಲ್ಲಾಧಿಕಾರಿಯನ್ನಾಗಿಯೇ ಕೊಪ್ಪಳ ಜಿಲ್ಲೆ ಪಡೆದಿದ್ದು ನಮ್ಮ ಹೆಮ್ಮೆಯೇ ಸರಿ.