ರಜತ ಮಹೋತ್ಸವ ಸಂಭ್ರಮದಲ್ಲಿ ಪ್ರತ್ಯೇಕ ‘ಕಿಷ್ಕಿಂದಾ ಜಿಲ್ಲೆ’ ಕೂಗು..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕೊಪ್ಪಳ ಜಿಲ್ಲೆ ರಜತ (ಬೆಳ್ಳಿ) ಮಹೋತ್ಸವ ಆಚರಿಸಿಕೊಳ್ಳುವ ಈ ಸುಸಂದರ್ಭದಲ್ಲಿ ಪ್ರತ್ಯೇಕ ‘ಕಿಷ್ಕಿಂದಾ’ ಜಿಲ್ಲೆಯ ಕೂಗು ಕೇಳಿ ಬರುತ್ತಿದೆ..!?

ಜಿಲ್ಲೆಯ ಮಹನೀಯರ ಸತತ ಹೋರಾಟದ ಫಲವಾಗಿ ಅಖಂಡ ರಾಯಚೂರು ಜಿಲ್ಲೆಯಿಂದ ‘ಕೊಪ್ಪಳ ಜಿಲ್ಲೆ’ ಪ್ರತ್ಯೇಕವಾಗಿ ಕಳೆದ ಅಗಸ್ಟ 24 ಕ್ಕೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ಇದೆ ಮಾರ್ಚ 10 ಮತ್ತು 11 ರಂದು ರಜತ ಮಹೋತ್ಸವ (ಬೆಳ್ಳಿ) ಆಚರಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಆದರೆ, ಸಂಭ್ರಮ ಪಡಬೇಕಾಗಿದ್ದ ಸಂದರ್ಭದಲ್ಲಿ ಐತಿಹಾಸಿಕ ಆನೆಗೊಂದಿ ಪ್ರದೇಶದಲ್ಲಿ (ಮಾಗಾಣಿ) ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿ ಬಂದಿರುವುದು ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಕೂಗು ಒಬ್ಬ ವ್ಯಕ್ತಿವೊಬ್ಬರ ಒತ್ತಾಯ ಅಥವಾ ಆಗ್ರಹವಾಗಿದ್ದರೇ.. ಈ ಕೂಗಿಗೆ ಅಷ್ಟೊಂದು ಪ್ರಾಮುಖ್ಯತೆ ಬರುತ್ತಿದ್ದಿಲ್ಲ. ಕನ್ನಡ ಪರ ಮನಸ್ಸುಗಳು ಒಂದಾಗುವ ಗಂಗಾವತಿ ತಾಲೂಕಾ ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ನಿರ್ಣಯಗಳಲ್ಲಿ ಗಂಗಾವತಿ ಕೇಂದ್ರ ಸ್ಥಾನವಾಗಿಸಿಕೊಂಡು, ಕಾರಟಗಿ, ಕನಕಗಿರಿ ಮತ್ತು ಪಕ್ಕದ ಜಿಲ್ಲೆಯ ಕಂಪ್ಲಿ ತಾಲೂಕು ಸೇರಿಸಿಕೊಂಡು, ಕಿಷ್ಕಿಂದಾ ಜಿಲ್ಲೆ ಎಂದು ಘೋಷಿಸುವಂತೆ ನಿರ್ಣಯ ತೆಗೆದುಕೊಂಡಿರುವುದು ಬಹಳಷ್ಟು ಕೂತೂಹಲಕ್ಕೆ ಕಾರಣವಾಗಿದೆ. ಹಾಗಾದರೆ, ಮೂಲ ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ, ಕುಷ್ಟಗಿ, ಕೂಕನೂರು ಮತ್ತು ಯಲಬುರ್ಗಾ ತಾಲೂಕುಗಳು ಮಾತ್ರ ಉಳಿಯುತ್ತವೆ ಎಂಬ ಇತ್ಯಾದಿ ಚರ್ಚೆಗಳು ಕೂಡಾ ಜಿಲ್ಲೆಯ ತುಂಬೆಲ್ಲಾ ನಡೆಯುತ್ತಿವೆ..!?