ಆಂಜನೇಯನ ಜನ್ಮಸ್ಥಳ ಸಾಕ್ಷಿಗೆ ಪುಸ್ತಕ ಸಿದ್ಧ..!?

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಹನುಮನ ಜನ್ಮ ಸ್ಥಳ ನಮ್ಮ ‘ಕಿಷ್ಕಿಂದಾ’ ಎಂದು ಹತ್ತು ಹಲವು ದಾಖಲೆಗಳೊಂದಿಗೆ ವಿಶಿಷ್ಟ ಚಿತ್ರಗಳ ಸಂಗ್ರಹದ ಪುಸ್ತಕವೊಂದನ್ನು ರಾಜ್ಯ ಸರಕಾರ ಈಗಾಗಲೇ ಸಿದ್ಧಗೊಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ..!?

“ಹಂಪಿ ಪರಿಸರದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ” ಎಂಬ ತಲೆ ಬರಹದ ಪುಸ್ತಕ ಹೊರ ತರುವ ಜವಾಬ್ದಾರಿಯನ್ನು ‘ರಾಜ್ಯ ಪುರಾತತ್ವ ಇಲಾಖೆ’ ಹೊತ್ತಿದೆ. ಈ ಕುರಿತು ಪುರಾತತ್ವ ಇಲಾಖೆ ಸೇರಿದಂತೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಖ್ಯಾತ ಇತಿಹಾಸ ತಜ್ಞರು ಒಳಗೊಂಡಂತೆ, ಎರಡು ಜಿಲ್ಲೆಗಳ ವಿವಿಧ ಇಲಾಖೆಗಳ ಸಂಶೋಧಕರ ಸಂಶೋಧನೆಯ ವರದಿಗಳನ್ನು ಪುಸ್ತಕದಲ್ಲಿ ಅಳವಡಿಸಿಕೊಳ್ಳಲು ದಿನಾಂಕ 31-12-2022 ರಂದು ಜರುಗಿದ ಸಭೆಯಲ್ಲಿ ಚರ್ಚಿಸಲಾಗಿತ್ತು. ಪುರಾಣ ಗ್ರಂಥಗಳನ್ನು ಆಧರಿಸಿ ಹಂಪಿ ವ್ಯಾಪ್ತಿ ಪ್ರದೇಶದಲ್ಲಿ ಜರುಗಿದೆ ಎನ್ನುವ ರಾಮಾಯಣದ ಗತಕಾಲದ ಇಲ್ಲಿನ ಅವಶೇಷಗಳ ವೈಶಿಷ್ಟ್ಯತೆಗಳ ಕುರುಹುಗಳನ್ನು ಪುಸ್ತಕದಲ್ಲಿ ಸಾಕ್ಷಿಕರಿಸಲಾಗಿದೆ ಎಂದು ತಿಳಿದು ಬಂದಿದೆ. ರಾಮಾಯಣದ ಪ್ರಮುಖರಾದ ರಾಮ, ಲಕ್ಷ್ಮಣ, ಹನುಮಂತ ಸೇರಿದಂತೆ ಸೀತೆ, ವಾಲಿ, ಸುಗ್ರೀವ, ರಾವಣ, ಪಂಪಾಸರೋವರ, ಅಂಜನಾದೇವಿ ಹಾಗೂ ವಾನರ ಸೈನ್ಯ ಮತ್ತು ರಾಮಾಯಣದ ಕಥೆಗೆ ಸಂಬಂಧಿಸಿದಂತೆ ದೇವಾಲಯಗಳ ಕುರಿತಾಗಿರುವ ಇತಿಹಾಸವನ್ನು ಪುಸ್ತಕದಲ್ಲಿ ಸ್ಪಷ್ಟವಾಗಿ  ಉಲ್ಲೇಖಿಸಲಾಗಿದೆ. ಈ ಕುರಿತು ಪುಸ್ತಕದ ‘ಮುಖಪುಟ’ ಮತ್ತು ‘ಬೆನ್ನು ಪುಟ’ಗಳ ಕರಡು ಪ್ರತಿಗಳು ‘ಕೃಷಿ ಪ್ರಿಯ’ ಪತ್ರಿಕೆಗೆ ಲಭ್ಯವಾಗಿವೆ.

ಆಂಜನೇಯನ ಜನ್ಮ ಸ್ಥಳ ನಮ್ಮದೇ ಪ್ರದೇಶ ಎನ್ನುವ ಆಂದ್ರಪ್ರದೇಶದ ಟಿಟಿಡಿ ಟ್ರಸ್ಟ್ ನ “ಮೊಂಡ” ವಾದಕ್ಕೆ ರಾಜ್ಯ ಸರಕಾರ ಹಂಪಿ ಪ್ರದೇಶದ  ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ ಎಂದು ಹತ್ತು ಹಲವು ಸಾಕ್ಷಿ ಚಿತ್ರಗಳೊಂದಿಗೆ ಪುಸ್ತಕವು ಅತಿ ಶೀಘ್ರದಲ್ಲಿ ಅನಾವರಣಗೊಳ್ಳದೆ ಎಂಬುದು ಪುರಾತತ್ವ ಇಲಾಖೆ ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ. ಪುಸ್ತಕ ಹೇಗೆ ಇರಬಹುದು..? ವಿಶೇಷವಾಗಿ ಪೌರಾಣಿಕ ಸೇರಿದಂತೆ ವೈಜ್ಞಾನಿಕತೆಗೆ ಹತ್ತಿರ ಇರುವ ಕುರುಹುಗಳನ್ನು ಪುಸ್ತಕದಲ್ಲಿ ಹೇಗೆ ಸಾಕ್ಷಿಕರಿಸಲಾಗಿದೆ ಎಂಬುದು ಆಂಜನೇಯ ಭಕ್ತರಿಗೆ ಬಹಳಷ್ಟು ಕುತೂಹಲಕಾರಿಯಾಗಿದೆ. ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿಗೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡು ಅಂಜನಾದ್ರಿ ಅಭಿವೃದ್ಧಿಗೆ ಸುದೀರ್ಘವಾಗಿ ಚರ್ಚಿಸಲಾಗಿದ್ದು ಅಲ್ಲದೆ, 100 ಕೋಟಿ ರೂಪಾಯಿಗಳ ಅನುದಾನದಲ್ಲಿ ಅಂಜನಾದ್ರಿ ಪ್ರದೇಶ ಅಭಿವೃದ್ಧಿಗೆ ಅಡಿಗಲ್ಲು ಹಾಗೂ ಕಾಮಗಾರಿ ಭೂಮಿ ಪೂಜೆ ಕೈಗೊಂಡಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದು..!!

ಪುಸ್ತಕದ ಬೆನ್ನು ಪುಟದಲ್ಲಿ ಪ್ರಕಟಿಸಿದ  ಅಂಜನಾದ್ರಿ ಬೆಟ್ಟದ ಫೋಟೋದಲ್ಲಿ ‘ಬೃಹತ್ತಾಕಾರದ ಆಂಜನೇಯ’ನನ್ನು ಹೋಲುವ ಮತ್ತು ‘ಬಾಲ ಹನುಮಂತ’ ಅಂಜನಾದ್ರಿ ದೇವಿ ಮಡಿಲಲ್ಲಿರುವಂತೆ ಹೋಲುವ ಚಿತ್ರಗಳಿಗೆ ಸೂಕ್ಷ್ಮ ರೇಖೆಗಳಿಂದ ಗುರುತಿಸಿರುವುದು ಅಂಜನಾದ್ರಿ ಬೆಟ್ಟದ ಬಗ್ಗೆ ಇರುವ ಕನ್ನಡಿಗರ ಧಾರ್ಮಿಕ ಭಾವನೆಗಳಿಗೆ ಮತ್ತಷ್ಟು ಚೈತನ್ಯ ತುಂಬುವಂತಿವೆ..!!

# ಅಂಜನಾದ್ರಿ # # ಕಿಷ್ಕಿಂದಾ #
# ಆಂಜನೇಯನ ಜನ್ಮ ಸ್ಥಳ #
# ಪುರಾತತ್ವ ಇಲಾಖೆ # # ಹಂಪಿ #
# ಸಾಕ್ಷಿ ಪುಸ್ತಕ #

# Anjanadri # # kishkinda #
# Aanjneyana Birth Place #
# Archaeology department #
# Hampi # Birth Evidence #