ಭೋವಿ ಸಮುದಾಯ ಮತದಾನ ಬಹಿಷ್ಕಾರಕ್ಕೆ ನಿರ್ಧಾರ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರು ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ..!

ಹಾಬಲಕಟ್ಟಿ ಗ್ರಾಮದಲ್ಲಿ ವಾಸವಾಗಿದ್ದ ‘ಭೋವಿ’ ಸಮುದಾಯದವರಿಗೆ ಕಳೆದ 1954 ರಿಂದ 2011 ರವರೆಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಆದರೆ, 2011 ರ ಬಳಿಕ ಸಮುದಾಯದವರಿಗೆ ಯಾವುದೇ ಪ್ರಮಾಣ ಪತ್ರವನ್ನು ತಾಲೂಕಿನಲ್ಲಿ ನೀಡುತ್ತಿಲ್ಲ. ಪ್ರಮಾಣ ಪತ್ರಗಳಿಲ್ಲದೆ ಸಮುದಾಯದ ನೂರಾರು ವಿದ್ಯಾರ್ಥಿಗಳು ಸರಕಾರಿ ಉದ್ಯೋಗ ಸೇರಿದಂತೆ ಅನೇಕ ಮೀಸಲಾತಿ ಸೌಲಭ್ಯಗಳಿಂದ ವಂಚಿತಾರಾಗುತ್ತಾ ಬಂದಿದ್ದಾರೆ. ಸಮುದಾಯದವರಿಗೆ ಈ ಮೊದಲು ನೀಡುತ್ತಿದ್ದ ‘ಪರಿಶಿಷ್ಟ ಜಾತಿ’ ಪ್ರಮಾಣ ಪತ್ರ ನೀಡಬೇಕೆಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡ ಭೋವಿ ಸಮುದಾಯದವರು ವಿಧಾನಸಭೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಕುರಿತು ದಿನಾಂಕ 12-04-2023 ರಂದು ತಹಸೀಲ್ದಾರ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಹಿನ್ನಲೆ : ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಕುಷ್ಟಗಿ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ 101 ದಿನಗಳ ಕಾಲ ಹೋರಾಟ ಕೈಗೊಂಡಿದ್ದರು. ಅಲ್ಲದೆ, ಆಗಿನ ಸರಕಾರ ಸದನ ಸಮಿತಿ ರಚಿಸಲಾಗಿತ್ತು. ಸಮಿತಿ ಅಧ್ಯಕ್ಷರು ಸೇರಿದಂತೆ 9 ಜನ ಶಾಸಕರು ಹಾಬಲಕಟ್ಟಿ ಗ್ರಾಮಕ್ಕೆ ಆಗಮಿಸಿ ಖುದ್ದು ಸಭೆ ನಡೆಸಿ ಪರಿಶೀಲನೆ ನಡೆಸಿತ್ತು. ಸಮಿತಿಯು ಅಧ್ಯಯನದ ಬಳಿಕ ಸರಕಾರಕ್ಕೆ ವರದಿ ಕೂಡಾ ನೀಡಿತ್ತು. ಆದರೆ, ನಂತರದ ಸರಕಾರಗಳು ಇವರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂಬ ಆರೋಪ ಭೋವಿಗಳಾದ್ದಾಗಿದೆ..!!