ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬಾಗಲಕೋಟೆ : ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಹೈಕಮಾಂಡ ಸಾಕಷ್ಟು ಅಳೆದು, ತೂಗಿ ಸ್ಥಳೀಯ ಹಿರಿಯ ಮುಖಂಡರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ ಅವರಿಗೆ ಟಿಕೇಟ್ ಘೋಷಿಸಿದೆ..!
ಕ್ಷೇತ್ರದ ಜಾಲಿಹಾಳ ಗ್ರಾಮದವರಾದ ಶಾಂತಗೌಡ ಪಾಟೀಲರು ಹೆಸರಿನಂತೆ ಬಹಳಷ್ಟು ‘ಶಾಂತ’ ಪ್ರಿಯರು ಕೂಡಾ ಹೌದು. ತಮ್ಮ ರಾಜಕೀಯ ಜೀವನದಲ್ಲಿ ಏಲ್ಲಿಯೂ ಹೆಸರು ಕೆಡಿಸಿಕೊಂಡವರಲ್ಲ. ಹುದ್ದೆ, ಸ್ಥಾನಗಳಿಗಾಗಿ ಹಪಹಪಿಸಿದವರಂತು ಮೊದಲೇ ಅಲ್ಲ. ಬಹಳಷ್ಟು ಶಾಂತ ಸ್ವರೂಪಿಯಾಗಿರುವ ಶಾಂತಗೌಡರನ್ನೇ ಗುರುತಿಸಿರುವ ಪಕ್ಷದ ಹೈಕಮಾಂಡ ಕ್ಷೇತ್ರದಲ್ಲಿ ಗೆಲವಿನ ಲೆಕ್ಕಾಚಾರವನ್ನು ಮಾಡಿಕೊಂಡಿದೆ. ಪಕ್ಷದ ಹಾಗೂ ಖಾಸಗಿ ಸರ್ವೇಗಳ ಆಧಾರದ ಮೇಲೆ ಕಮಲ ಪಡೆ ಇವರಿಗೆ ಟಿಕೇಟ್ ನೀಡಲು ಮನಸ್ಸು ಮಾಡಿದೆ ಎಂಬುದು ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ. ಬಾದಾಮಿ ಮಂಡಲ ಅಧ್ಯಕ್ಷರಾಗಿ ಜನಾನುರಾಗಿರುವ ಶಾಂತಗೌಡರನ್ನು ಪಕ್ಷ ಸಂಘಟಿಸುವ ಜವಾಬ್ದಾರಿ ಹೆಚ್ಚಿಸುವ ಮೂಲಕ ಈ ಹಿಂದೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದು ಸಣ್ಣ ಮಾತಲ್ಲ. ಜಿಲ್ಲೆಯ ಘಟಾನುಘಟಿ ನಾಯಕರುಗಳ ಮಧ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಇವರು ಶ್ರಮವಹಿಸಿದ್ದು ಸಾಕಷ್ಟಿದೆ. ಸಂಘಟನೆಯ ವಿಷಯದಲ್ಲಿ ಸದಾ ಕ್ರಿಯಾಶೀಲರಾಗಿರುವ ಶಾಂತಗೌಡರು ಯಾವಾಗಲೂ ಸಿದ್ಧ ಹಸ್ತರು. ಕೇವಲ ಒಂದು ಧರ್ಮ, ಸಮುದಾಯಕ್ಕೆ ಸೀಮಿತವಾಗಿರದ ಇವರು ಎಲ್ಲ ಸಮುದಾಯದ ನಾಯಕರುಗಳನ್ನು ಒಟ್ಟೊಟ್ಟಿಗೆ ಕರೆದುಕೊಂಡು ಹೋಗುವ ನಾಯಕತ್ವ ಗುಣ ಇರುವುದು ಇವರಲ್ಲಿನ ಪ್ರಮುಖ ವಿಶೇಷತೆ ಎಂದರೆ ತಪ್ಪಾಗಲಾರದು. ಇಂತಹ ವಿಶಿಷ್ಟವಾದ ವ್ಯಕ್ತಿಗೆ ಕೆಸರಿ ಪಡೆ ಟಿಕೇಟ್ ಹಂಚಿಕೆ ಮಾಡಿರುವಲ್ಲಿ ಬಹಳಷ್ಟು ದೂರದೃಷ್ಟಿ ಇದೆ ಎಂಬುದು ಕ್ಷೇತ್ರದ ಪ್ರಬುದ್ದರ ಲೆಕ್ಕಾಚಾರವು ಒಂದಾಗಿದೆ. ಕಳೆದ ಭಾರಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ತೀವ್ರ ಹೋರಾಟ ನಡೆಸಿ ಅಲ್ಪ ಮತಗಳಲ್ಲಿ ಪರಾಭವಗೊಂಡಿದ್ದ ಶ್ರೀರಾಮಲು ಅವರಿಗೆ ಅತ್ಯಂತ ಆತ್ಮೀಯರಾಗಿರುವ ಈ ಯುವಕರ ಕಣ್ಮಣಿ ಶಾಂತಗೌಡರಿಗೆ ಪಕ್ಷದ ಜೊತೆಗೆ ಹಲವು ಹಿರಿಯ ನಾಯಕರ ಕೃಪಾಕಟಾಕ್ಷ ಇದೆ ಎಂದು ಹೇಳಲಾಗುತ್ತಿದೆ. ಇಂತಹ ಪ್ರಶ್ನಾತೀತ ನಾಯಕ ಒಮ್ಮೆ ಬಾದಾಮಿ ಕ್ಷೇತ್ರದ ಶಾಸಕನಾಗಬೇಕೆಂಬ ಮಹಾದಾಸೆ ಹೊಂದಿ, ಮತದಾರ ಪ್ರಭುಗಳ ಮುಂದೆ ಮತ ಭಿಕ್ಷೆಗಾಗಿ ಆಗಮಿಸುತ್ತಿದ್ದಾರೆ.
ಕಿರು ಪರಿಚಯ : ಬೇಲೂರು-ಜಾಲಿಹಾಳ ಭಾಗದಲ್ಲಿ ಬಹಳಷ್ಟು ಚಿರಪರಿಚಿತರಾಗಿದ್ದ ಲಳಗಿ ಗೌಡರು ಎಂತಲೇ ಖ್ಯಾತಿಯ ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿದ ಶಾಂತಗೌಡ ಪಾಟೀಲರು, ಎಸ್.ಟಿ ಪಾಟೀಲ್ ಅಂತ ಫೇಮಸ್. ಪದವಿಧರರಾದ ಇವರು 2000 ಇಸ್ವಿಯಿಂದ ರಾಜಕೀಯ ಜೀವನ ಆರಂಭಿಸಿ, ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. 2010 ರಿಂದ 2020 ರವರೆಗೆ ಬಿಜೆಪಿ ಬಾದಾಮಿ ಮಂಡಲ ಅಧ್ಯಕ್ಷರಾಗಿ ಹಾಗೂ 2020 ರಿಂದ ಇಲ್ಲಿಯವರೆಗೆ ಜಿಲ್ಲಾಧ್ಯಕ್ಷರಾಗಿ ಅಭಿಮಾನಿಗಳ ಪಡೆಯೊಂದನ್ನು ಹೊಂದಿದ್ದಾರೆ. ಪಕ್ಷಕ್ಕೆ ಸುದೀರ್ಘವಾದ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರ ಸೇರಿದಂತೆ ಪಕ್ಕದ ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆದಿರುವ ಶ್ರೀ ಸಿದ್ಧೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರು ಕೂಡಾ ಹೌದು. ಯುವಕ ಸಂಘಗಳ ಅಭಿವೃದ್ಧಿ ಸೇರಿದಂತೆ ಸಾಮೂಹಿಕ ವಿವಾಹದಂತಹ ಹಲವು ಧಾರ್ಮಿಕ ಕಾರ್ಯಕ್ರಗಳನ್ನು ಇಲ್ಲಿಯವರೆಗೆ ಕೈಗೊಂಡಿದ್ದಾರೆ..!!