ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : 16 ನೇ ವಿಧಾನಸಭೆ ಚುನಾವಣೆಯ ಕಾವು ರಾಜ್ಯದಲ್ಲಿ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂಬ ಹಠದಲ್ಲಿ ಪಕ್ಷಾಂತರಗಳ ಪರ್ವ ಜೋರಾಗಿಯೇ ನಡೆದಿದೆ. ಇಂತಹ ರಾಜಕೀಯ ಚದುರಂಗದಾಟದ ಮಧ್ಯದಲ್ಲಿ ‘ಅಶ್ವಿನಿ’ ಮಳೆ ದಿನಾಂಕ 14-04-2023 ರಂದು ಮಧ್ಯಾಹ್ನ 3 ಗಂಟೆಗೆ ಕರ್ಕ ಲಗ್ನದ ಶುಭ ಘಳಿಗೆಯಲ್ಲಿ ಪ್ರವೇಶ ಮಾಡಿದ್ದಾಳೆ..!
ಮುಂಗಾರಿನ ಮೊದಲ ಅಶ್ವಿನಿ ಮಳೆಯು ತುಂತುರು ಹನಿಗಳ ಮೂಲಕ ಗಾಳಿಯ ಅರ್ಭಟದೊಂದಿಗೆ ಜೋರಾಗಿಯೇ ಸದ್ದು ಮಾಡುವ ಗುಣ ಲಕ್ಷಣಗಳ ಮುನ್ಸೂಚನೆಗಳಿವೆ. 1 ಮತ್ತು 4 ನೇ ಚರಣದಲ್ಲಿ 4 ಆಣೆ ಮಳೆ ಸುರಿಯುವುದು ಪಕ್ಕಾ ಎಂಬ ಮಳೆಯ ವಿಶ್ಲೇಷಣೆ ರೈತರಿಂದ ಕೇಳಿ ಬರುತ್ತಿದೆ. ಒಟ್ಟು 15 ದಿನಗಳ ಮೊದಲ ಈ ಮಳೆಯು 11 ದಿನಗಳ ಕಾಲ ಕರಾವಳಿ ಸೇರಿದಂತೆ ಉತ್ತರ ಕರ್ನಾಟಕದ ಬಯಲು ಸೀಮೆ ಪ್ರದೇಶದಲ್ಲಿ ಮಳೆಯ ಪವಾಡ ಜರುಗಲಿದೆ ಎಂಬುದು ಕೇಳಿಬಂದಿದೆ. ವರ್ಷದ ಮೊದಲ ಈ ಅಶ್ವಿನಿ ಮಳೆಯನ್ನು ರಾಜ್ಯದ ಕೃಷಿಕರು ಬಹಳಷ್ಟು ಅಭಿಮಾನ ಅಕ್ಕರೆಯಿಂದ ಬರಮಾಡಿಕೊಂಡಿದ್ದಾರೆ. ನಾಡಿನ ಸಮಸ್ತ ಅನ್ನದಾತರ ಪರವಾಗಿ ‘ಕೃಷಿ ಪ್ರಿಯ’ ಪತ್ರಿಕೆ ಅಶ್ವಿನಿ ಮಳೆಯನ್ನು ಸ್ವಾಗತಿಸುವುದರ ಜೊತೆಗೆ ಮುಂಗಾರು ಹಿಂಗಾರು ಸಮೃದ್ಧವಾಗಿರಲೆಂದು ಆಶಿಸಿದೆ..!!
ರೈತರ ವಾಡಿಕೆ : “ಅಶ್ವಿನಿ ಆದ್ರೇ.. ಮುಂದೆ ಶಿಶುವಿಗೆ ಕುಡಿಯಲು ಹನಿ ನೀರು ಇರುವುದಿಲ್ಲ..” ಈ ವಾಡಿಕೆ ಅರ್ಥ ಮೊದಲನೇ ಈ ಮಳೆ ಸುರಿದರೇ, ಮುಂದೆ ಶಿಶುವಿಗೆ ಬೇಕಾಗುವಷ್ಟು ನೀರಿನ ಕೊರತೆ ಎದುರಿಸಬೇಕಾಗುತ್ತದೆ ಎಂಬ ರೈತರ ವಾಡಿಕೆ ಮಾತುಗಳು ಜನಜನಿತ.