ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗುತ್ತಿರುವ ‘ಕೊಪ್ಪಳ’

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇಡೀ ದೇಶದಲ್ಲಿಯೇ ‘ಕೊಪ್ಪಳ ಲೋಕಸಭಾ ಕ್ಷೇತ್ರ’ ಆರಂಭದಿಂದಲೂ ಹಲವು ವಿಭಿನ್ನ ಹಾಗೂ ವಿಶೇಷ ರಾಜಕೀಯ ಘಟನೆಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ವಿಶೇಷ..!

ಈ ಕುರಿತು ಮೊದಲ ಲೋಕಸಭಾ ಚುನಾವಣೆಯಿಂದ ಹಿಡಿದು, ಈಗಿನ ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ರಾಜ್ಯ ರಾಜಕಾರಣಕ್ಕೆ ಮರುಳುವುದಕ್ಕಾಗಿ ತಮ್ಮ ‘ಕೊಪ್ಪಳ’ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮುಂದಾಗಿರುವ ಘಟನೆವರೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಕ್ಷಿಪ್ತವಾದ ಮಾಹಿತಿ ನಿಮಗಾಗಿ…

ದೇಶದ ಮೊದಲ ಪಕ್ಷೇತರ ಸಂಸದ : 1952 ರಲ್ಲಿ ಜರುಗಿದ ಮೊದಲನೇ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂಸದ ಶಿವಮೂರ್ತಿಸ್ವಾಮಿ ‘ಪಕ್ಷೇತರ’ ಅಭ್ಯರ್ಥಿಯಾಗಿದ್ದರು ಎಂಬುದು ಕ್ಷೇತ್ರದ ಮೊದಲ ವಿಶೇಷ. ಆಗ ಇಡೀ ಲೋಕಸಭೆಯೇ ಕಾಂಗ್ರೆಸ್ ಮಯವಾಗಿದ್ದರೇ.. ಆಗಿನ ಕುಷ್ಟಗಿ ಲೋಕಸಭಾ ಕ್ಷೇತ್ರದಿಂದ ಜಯಶಾಲಿಯಾಗಿದ್ದು ಪಕ್ಷೇತರ ಅಭ್ಯರ್ಥಿ ಎಂಬುದು ಲೋಕಸಭಾ ಇತಿಹಾಸದಲ್ಲಿಯೇ ಅವಿಸ್ಮರಣೀಯ ದಾಖಲೆ ಕೂಡಾ ಹೌದು. ಇಂತಹ ವಿಭಿನ್ನ ಸಂಸದ ‘ಶಿವಮೂರ್ತಿಸ್ವಾಮಿ’ ನಮ್ಮ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸ್ವಾತಂತ್ರ್ಯ ಸೇನಾನಿ ಎಂಬುದು ಅದರ ಅಷ್ಟೆ ಹಮ್ಮೆಯ ಸಂಗತಿ. ಇಲ್ಲಿನ ಏಕೈಕ ಪಕ್ಷೇತರ ಸಂಸದರನ್ನ ಆಗಿನ ಪ್ರಥಮ ಪ್ರಧಾನಮಂತ್ರಿ ಜವಹರಲಾಲ್ ನೆಹರು ಅವರು, ತುಂಬಿದ ಕಾಂಗ್ರೆಸ್ ಲೋಕಸಭೆಗೆ ನಮ್ಮ ವಿಭಿನ್ನ ಸಂಸದರನ್ನು ಬಹಳಷ್ಟು ಅಭಿಮಾನದಿಂದ ಪರಿಚಯಸಿದ್ದು ಮರೆಯಲಾಗದ ಇತಿಹಾಸ.

ದಕ್ಷಿಣ ಭಾರತದ ಏಕೈಕ ಜನತಾದಳ ಸದಸ್ಯನಾಗಿದ್ದು ಇಲ್ಲಿಂದಲೇ : 1989 ರಲ್ಲಿ ಇಲ್ಲಿಂದ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದ ಬಸವರಾಜ ಪಾಟೀಲ ಅನ್ವರಿ ಅವರು ಇಡೀ ದಕ್ಷಿಣ ಭಾರತದಲ್ಲಿ ಇವರು ಒಬ್ಬರೇ ‘ಜನತಾದಳ’ ದಿಂದ ಆಯ್ಕೆಯಾದ ಸಂಸದರು ಎಂಬ ಖ್ಯಾತಿ ಕೊಪ್ಪಳ ಕ್ಷೇತ್ರದ ಮತ್ತೊಂದು ವಿಶಿಷ್ಟತೆ.

ಸಿದ್ಧರಾಮಯ್ಯ ಸೋತಿದ್ದಿದ್ದು ಇಲ್ಲೆ : 1991 ರಲ್ಲಿ ಜರುಗಿದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸೋಲಿನ ರುಚಿ ತೋರಿಸಿದ್ದು ಇದೆ ಲೋಕಸಭೆ ಕ್ಷೇತ್ರದ ಜನರು. ಹಾಲುಮತ ಸಮುದಾಯದ ಮತಗಳು ಹೆಚ್ಚಿರುವ ಕಾರಣದಿಂದ ತಾವು ಜಯಸಾಧಿಸಬಹುದು ಎಂಬ ನಿರೀಕ್ಷೆಯಲ್ಲಿ ಸ್ಪರ್ಧೆ ನೀಡಿ, 11197 ಮತಗಳ ಅಂತರದಿಂದ ಪರಾಭಗೊಂಡಿದ್ದನ್ನು ಕೊಪ್ಪಳ ಕ್ಷೇತ್ರ ಹಾಗೂ ಇಲ್ಲಿನವರನ್ನು ಇವತ್ತಿಗೂ ಸಿದ್ದು ಮರೆತ್ತಿಲ್ಲ.

ಕರಡಿ ರಾಜೀನಾಮೆಯಿಂದ ಕೊಪ್ಪಳ ಮತ್ತೊಮ್ಮೆ ಸುದ್ದಿಯಲ್ಲಿ : ಈ ಸಧ್ಯ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಲೋಕಸಭೆ ರಾಜಕೀಯದಿಂದ ಬೇಸತ್ತು, ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲು ಕೊಪ್ಪಳ ಅಸೆಂಬ್ಲಿ ಕ್ಷೇತ್ರದಿಂದ ಕಮಲ ಟಿಕೇಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವುದು ಕಡ್ಡಾಯವೆನ್ನುವ ಕರಡಿಯವರ ಅಭಿಪ್ರಾಯದಿಂದ ಕೊಪ್ಪಳ ಲೋಕಸಭಾ ಕ್ಷೇತ್ರ ಮತ್ತೆ ಆರು ತಿಂಗಳ ಮಟ್ಟಿಗಾದರು ಮತ್ತೊಮ್ಮೆ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಿಸುವುದು ಇತ್ಯಾದಿ ಚರ್ಚೆಗಳಿಂದ ‘ಕೊಪ್ಪಳ ಲೋಕಸಭಾ ಕ್ಷೇತ್ರ’ ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇಷ್ಟೆಲ್ಲಾ ವಿಭಿನ್ನ ವಿಶಿಷ್ಟತೆಗಳ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರ ದೇಶದಲ್ಲಿಯೇ ಅತಿ ಹೆಚ್ಚು ಸದ್ದುಮಾಡುತ್ತಿರುವ ಕ್ಷೇತ್ರ ಎಂಬ ಕೀರ್ತಿ ಮಾತ್ರ ಉಳಿಸಿಕೊ‌ಡಿದೆ..!!