ಕುಷ್ಟಗಿಯಲ್ಲಿ ಮೂರು ನಾಮಪತ್ರ ತಿರಸ್ಕೃತ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ನಾಮಪತ್ರಗಳು ತಿರಸ್ಕೃತಗೊಂಡಿವೆ..!

ಕುಷ್ಟಗಿಯಲ್ಲಿ ಉಮೇದುವಾರಿಕೆ ಬಯಸಿ 18 ಜನರು 37 ನಾಮಪತ್ರಗಳನ್ನು ಸಲ್ಲಿಸಿದ್ದರು. ಇಂದು ಜರುಗಿದ ನಾಮಪತ್ರಗಳ ಪರಿಶೀಲನೆ ಬಳಿಕ ಕ್ರಮಬದ್ಧವಲ್ಲದ 3 ಮೂರು ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ತಿರಸ್ಕೃತಗೊಳಿಸಿದ್ದಾರೆ. ಈ ಸಧ್ಯ 17 ಜನರು ಸಲ್ಲಿಸಿದ 34 ನಾಮಪತ್ರಗಳು ಕ್ರಮಬದ್ಧವಾಗಿವೆ.

ನಾಗರಾಜ ತಳವಾರ : ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಬಯಸಿ ನಾಗರಾಜ ತಳವಾರ ಅವರು ಸಲ್ಲಿಸಿದ ನಾಮಪತ್ರವು ತಿರಸ್ಕಾರ ಗೊಂಡಿದೆ. ಪಕ್ಷದ ಎ ಮತ್ತು ಬಿ ಫಾರ್ಮ್ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತಗೊಂಡಿದೆ. ನಾಗರಾಜ ತಳವಾರ ಅವರು ಸಲ್ಲಿಸಿದ್ದ ಒಂದೇ ನಾಮಪತ್ರ ತಿರಸ್ಕಾರವಾಗಿದ್ದರಿಂದ ಉಮೇದುವಾರಿಕೆ ಬಯಸಿದವರ ಸಂಖ್ಯೆ 17 ಕ್ಕೆ ಇಳಿದಿದೆ. ನಾಮಪತ್ರ ಪರಿಶೀಲನೆಯಲ್ಲಿಯೇ ತಿರಸ್ಕೃತಗೊಂಡ ಕಾರಣದಿಂದ ಇವರು ಕಣದಿಂದ ಹೊರಗಡೆ ಉಳಿಯುವಂತಾಗಿದೆ.

ಶಾಂತರಾಜ ಗೋಗಿ : ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ಶಾಂತರಾಜ ಗೋಗಿ ಅವರ ನಾಮಪತ್ರವು ಕನಿಷ್ಠ ಸೂಚಕರ ಸಂಖ್ಯೆಯಲ್ಲಿ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಾಮಪತ್ರವು ತಿರಸ್ಕೃತಗೊಂಡಿದೆ. ಆದರೆ, ರಾಷ್ಟ್ರೀಯ ನವರಂಗ ಕಾಂಗ್ರೆಸ್ ಪಕ್ಷದಿಂದ ಇವರೇ ಸಲ್ಲಿಸಿದ ನಾಮಪತ್ರ ಕ್ರಮಬದ್ಧವಾಗಿದೆ.

ತುಕಾರಾಮ್ ಸೂರ್ವೇ : ಜೆಡಿಎಸ್ ಪಕ್ಷದಿಂದ ತುಕಾರಾಮ್ ಸೂರ್ವೇ ಅವರು ಸಲ್ಲಿಸಿದ ನಾಮಪತ್ರ ಪಕ್ಷದ ಎ ಮತ್ತ ಬಿ ಫಾರ್ಮ್ ಲಗತ್ತಿಸದ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿದೆ. ಇವರೇ ಸಲ್ಲಿಸಿದ ಇಂಡಿಯನ್ ಮೂಮೆಂಟ್ ಪಾರ್ಟಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ನಾಮಪತ್ರ ಹಿಂಪಡೆಯಲು 24-04-2023 ಕೊನೆಯ ದಿನವಾಗಿರುತ್ತದೆ..!!