ಹನುಮನಾಳದಲ್ಲಿ ಎತ್ತಿನ ‘ಸಮಾನತೆ’ ಮೆರವಣಿಗೆ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇಂದು ವಿಶ್ವ ಗುರು ಶ್ರೀ ಬಸವೇಶ್ವರರ ಜಯಂತಿ. ಕೃಷಿಕರ ಪಾಲಿಗಂತು ಸಂಭ್ರಮದ ದಿನ ಅಂದರೆ ತಪ್ಪಾಗಲಾರದು..!

 

 

ಬಸವ ಜಯಂತಿ ರೈತರಪಾಲಿಗೆ ಅಷ್ಟೇ ಅಲ್ಲ.. ಅವರುಗಳ ಜೀವಾಳ ಆಗಿರುವ ಜಾನುವಾರುಗಳಿಗೂ ಕೂಡಾ ಹಬ್ಬದ ವಾತಾವರಣ. ಜಾನುವಾರುಗಳು ಇವತ್ತು ತಮ್ಮ ಹಬ್ಬವೆಂದು ಸಂಭ್ರಮವಿಸುತ್ತವೆ. ಜಾನುವಾರುಗಳು ಹೇಗೆ ಸಂಭ್ರಮಿಸುತ್ತವೆ..? ಅವುಗಳಿಗೆ ಈ ಒಂದು ದಿನ ಹೇಗೆ ಹಬ್ಬವಾಗಿರುತ್ತದೆ..!? ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು. ಹೌದು, ಸತ್ಯ. ಹಾಗಿದ್ದರೆ ನಿಮಗಾಗಿಯೇ ಈ ವಿಭಿನ್ನ ವಿಶಿಷ್ಟ ವರದಿ..!

ವರ್ಷವಿಡೀ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಎತ್ತು, ಹೋರಿ ಇತ್ಯಾದಿಗಳಿಗೆ ಬಸವ ಜಯಂತಿ ದಿನ ಯಾವ ಕೃಷಿ ಚಟುವಟಿಕೆಗಳು ಇರುವುದಿಲ್ಲ. ಇಂದು ಬಸವ ಜಯಂತಿ ಆಗಿದ್ದರಿಂದ ಅವುಗಳಿಗೆ ಸಾಂಪ್ರದಾಯಿಕ ರಜೆ ದಿನದ ಜೊತೆಗೆ ವೈಭವದ ದಿನ ಕೂಡಾ ಆಗಿರುತ್ತದೆ. ರೈತನು ಈ ದಿನ ತನ್ನ ಎಲ್ಲಾ ಜಾನುವಾರುಗಳನ್ನು ಸ್ವಚ್ಛವಾಗಿ ಮೈ ತೊಳೆಯುತ್ತಾನೆ. ಸ್ವಚ್ಛಂದವಾದ ಜಾನುವಾರುಗಳಲ್ಲಿಯೇ ವಿಶೇಷವಾಗಿ ಹೋರಿಗಳಿಗೆ ವಿವಿಧ ಬಣ್ಣಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತದೆ. ಕೊಂಬುಗಳಿಗೆ ವಾರನೀಸ್ ಕಲರ್ ನಿಂದ ಅಲಂಕಾರ ಕೈಗೊಳ್ಳಲಾಗುತ್ತಿದೆ. ಅವುಗಳ ಕೊಂಬುಗಳಿಗೆ ಕೊಂಬಣಸು, ಹಣೆ ಮಣಿ, ಕರಿಮಣಿ, ಹಣೆಕಟ್ಟು, ಹೊಸದಾದ ಕಣ್ಣಿ, ಮಗಡ, ಮೂಗುದಾರ, ನೆದರು ದಾರ, ತಾಂಬ್ರದ ಗೆಜ್ಜೆ ಸರ, ವಿವಿಧ ಮುತ್ತುಗಳು ಸೇರಿದಂತೆ ರಿಬ್ಬನ್ ಗಳೊಂದಿಗೆ ಅಲಂಕೃತ ಹೂಗಳನ್ನು ಹಾಕುತ್ತಾರೆ. ಕುತ್ತಿಗೆಗೆ ಹಾಕಿದ ಕಣ್ಣಿ ಒಂದನ್ನು ಬಿಟ್ಟು ಎಲ್ಲವೂ ನೂಲು ದಾರಗಳಿಂದ ಸಿದ್ಧಪಡಿಸಿದ್ದನ್ನು ಬಳಸುವುದು ವಿಶೇಷವಾಗಿರುತ್ತವೆ. ಈ ತರಹದ ವಿಭಿನ್ನ ಅಲಂಕಾರಗೊಳಿಸಿದ ರೈತರ ಮಿತ್ರರಾದ ಎತ್ತು ಮತ್ತು ಹೋರಿ ಜೋಡಿಗಳನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಎತ್ತು ಮತ್ತು ಹೋರಿಗಳನ್ನು ಅಲಂಕಾರಗೊಳಿಸುವುದು ಒಬ್ಬ ರೈತನಿಗಿಂತ ಇನ್ನೊಬ್ಬ ರೈತ ವಿಭಿನ್ನತೆ ಪಡೆದುಕೊಳ್ಳುತ್ತಾನೆ. ಎಲ್ಲರಿಗಿಂತ ನನ್ನ ಹೋರಿಯೇ ಬಹಳಷ್ಟು ಚೆಂದ ಕಾಣುಬೇಕು. ನೋಡಿದ ಎಲ್ಲರೂ ನನ್ನ ಹೋರಿ ಎತ್ತುಗಳಿಗೆ ಮೆಚ್ಚುಗೆವ್ಯಕ್ತಪಡಿಸಬೇಕು ಎಂಬ ಮಹದಾಸೆ ಹೊತ್ತ ರೈತ ತನ್ನ ಹೋರಿ ಮತ್ತು ಎತ್ತುಗಳನ್ನು ಗ್ರಾಮದಲ್ಲಿ ಜರಗುವ ಎತ್ತುಗಳ ಜೊತೆಗೆ ತಾವು ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಇಂತಹ ವಿಶಿಷ್ಟ ಮೆರವಣಿಗೆಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿಂದು ಜರುಗಿತು. ಈ ರಾಸುಗಳ ಮೆರವಣಿಗೆಯೂ ರೈತರ ಪಾಲಿಗೆ ಹಬ್ಬದ ಸಂಭ್ರಮವಾಗಿ ಕಂಡುಬಂದಿತ್ತು..!!

ವಿವಿಧ ಬೇಡಿಕೆಗಳ ಈಡೇರಿಕೆಗಳಿಗೆ ನಿತ್ಯ ಜರಗುವ ಮೆರವಣಿಗೆಗೂ.. ಇಂದು ಜರುಗಿದ ಎತ್ತುಗಳ ಮೆರವಣಿಗೆಗೆ ಬಹಳಷ್ಟು ವ್ಯತ್ಯಾಸವಿದೆ. ಮೂಕ ಪ್ರಾಣಿಗಳಾದ ಎತ್ತಿನ ಮೆರವಣಿಗೆಯಲ್ಲಿ ಯಾವ ಸ್ವಾರ್ಥ ಇರುವುದಿಲ್ಲ. 12 ನೇ ಶತಮಾನದಲ್ಲಿ ಸಾರಿ ಹೋಗಿರುವ ಜಗಜ್ಯೋತಿ ಬಸವಣ್ಣನವರ ‘ಸಮಾನತೆ’ ಸಂದೇಶ ಸಾರುವ ಮೆರವಣಿಗೆ ಅಷ್ಟೇ..!

ಪ್ರಗತಿಪರ ಕೃಷಿಕರು, ಹನುಮನಾಳ.