ಕೊಪ್ಪಳ ಜಿಲ್ಲೆಯಲ್ಲಿ ‘ರಡ್ಡಿ’ಗಳ ಕಲರವ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್

ಕೊಪ್ಪಳ : ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ರಡ್ಡಿ ಸಮುದಾಯದ 5 ಜನ ನಾಯಕರುಗಳು ಪಾರುಪತ್ಯ ಮೆರೆಯುತ್ತಿರುವುದು ವಿಶೇಷ..!

ಜಿಲ್ಲೆಯ ಕನಕಗಿರಿ (ಪರಿಶಿಷ್ಟ ಜಾತಿ) ಕ್ಷೇತ್ರ ಹೊರತುಪಡಿಸಿ, ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ರಡ್ಡಿ ಸಮುದಾಯಕ್ಕೆ ಸೇರಿದ 5 ಜನ ಅತ್ಯಂತ ಪ್ರಭಾವಿ ಮುಖಂಡರು ಮುಂಚೂಣಿಯಲ್ಲಿದ್ದಾರೆ. ರಾಜ್ಯದಲ್ಲಿಯೇ ರಡ್ಡಿ ಸಮುದಾಯದವರು ಸಿಂಹಪಾಲು ಕಣದಲ್ಲಿರುವ ಜಿಲ್ಲೆ ಎಂಬ ಖ್ಯಾತಿ ಕೊಪ್ಪಳ ಜಿಲ್ಲೆಗಿದೆ. ನೂತನ ಕೆ.ಆರ್.ಪಿ.ಪಿ ಪಕ್ಷ ಸೇರಿದಂತೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಪ್ರಾದೇಶಿಕ ಜೆಡಿಎಸ್ ಪಕ್ಷದಲ್ಲಿ ಟಿಕೇಟ್ ಗಿಟ್ಟಿಸಿಕೊಳ್ಳುವ ಮೂಲಕ ತಮ್ಮದೇ ಆದ ವರ್ಚಸ್ಸನಲ್ಲಿದ್ದಾರೆ.

ಗಂಗಾವತಿ : ರಾಜ್ಯದಲ್ಲಿ ನೂತನ ಪಕ್ಷ ಸ್ಥಾಪಿಸಿದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರೇ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪೈಪೋಟಿಯಲ್ಲಿದ್ದಾರೆ. ಬಿಜೆಪಿಯಿಂದ ‘ಬಣಜಿಗ’ ಸಮುದಾಯದ ಹಾಲಿ ಶಾಸಕ ಪರಣ್ಣ ಮುನವಳ್ಳಿ ಕಾಂಗ್ರೆಸ್ ನಿಂದ ಮುಸ್ಲಿಂ ಸಮುದಾಯದ ಇಕ್ಬಾಲ್ ಅನ್ಸಾರಿ ಎಂಬ ಇಬ್ಬರು ಪಾರಂಪರಿಕ ಎದುರಾಳಿಗಳಿಗೆ ಗಾಲಿ ಜನಾರ್ಧನರೆಡ್ಡಿ ಸ್ಪರ್ಧೆಯು ನುಂಗಲಾರದು ತುತ್ತಾಗಿದೆ. ಚುನಾವಣೆ ದಿನಾಂಕ ಘೋಷಣೆ ಮುನ್ನ ಗಂಗಾವತಿ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ ಎಂಬ ಮಾತುಗಳು ಕೂಡಾ ಕೇಳಿ ಬಂದಿವೆ. ಈ ಚುನಾವಣೆಯಲ್ಲಿ ಫುಟ್ಬಾಲ್ ಕ್ಯಾಪ್ಟನ್ ಎಂದು ಕರೆಯಲ್ಪಡುವ ಜನಾರ್ಧನರೆಡ್ಡಿ ತನ್ನ ಕ್ಯಾಪ್ಟನ್ ಪಟ್ಟ ಉಳಿಸಿಕೊಳ್ಳುವುದಕ್ಕಾದರೂ ಜಯಸಾಧಿಸಲೇಬೇಕೆಂಬ ಛಲದಲ್ಲಿದ್ದಾರೆ.

ಯಲಬುರ್ಗಾ : ಕಾಂಗ್ರೆಸ್ ನಿಂದ ಬಸವರಾಜ ರಾಯರಡ್ಡಿ ಬಿಜೆಪಿಯಿಂದ ಹಾಲಪ್ಪ ಆಚಾರ್ಯ ಇವರಿಬ್ಬರು ರಡ್ಡಿ ಸಮುದಾಯದವರಾಗಿದ್ದು ಕ್ಷೇತ್ರದ ವಿಶೇಷ. ಕ್ಷೇತ್ರದಲ್ಲಿ ಇವರಿಬ್ಬರ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ಇಲ್ಲಿ ಜಯಸಾಧಿಸಿದವರು ಯಾರೆ ಆಗಲಿ ಅವರು ರಡ್ಡಿ ಸಮುದಾಯದವರು ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಇನ್ನೊಂದು ಕೋಮಿನ ಪ್ರಬಲರು ಎದುರಾಳಿ ಇಲ್ಲದ ಹಿನ್ನೆಲೆಯಲ್ಲಿ ರಡ್ಡಿ ಸಮುದಾಯಕ್ಕೆ ಜೈ ಎನ್ನಬೇಕಾದ ಪರಿಸ್ಥಿತಿ ಕ್ಷೇತ್ರದವರಿಗೆ ಅನಿವಾರ್ಯತೆ ಎದುರಾಗಿದೆ.

ಕುಷ್ಟಗಿ : ಸದಾ ಹೊಸತನ ಬಯಸುವ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲುಮತ ಸಮುದಾಯದ ದೊಡ್ಡನಗೌಡ ಪಾಟೀಲ ಬಿಜೆಪಿಯಿಂದ, ರಡ್ಡಿ ಸಮುದಾಯದ ಅಮರೇಗೌಡ ಪಾಟೀಲ ಬಯ್ಯಾಪೂರು ಕಾಂಗ್ರೆಸ್ ನಿಂದ ಸ್ಪರ್ಧೆ ನೀಡಿದ್ದಾರೆ. ಕ್ಷೇತ್ರದಲ್ಲಿ ಯಾರೊಬ್ಬರು ಇಲ್ಲಿಯವರೆಗೂ ಸತತವಾಗಿ ಎರಡು ಬಾರಿ ಜಯಸಾಧಿಸಿಲ್ಲ. ಇದಕ್ಕೆಲ್ಲಾ ರಾಜ್ಯದಲ್ಲಿಯೇ ಅತ್ಯಂತ ಪ್ರಜ್ಞಾವಂತ ಮತದಾರರು ಇಲ್ಲಿನವರು ಎಂಬ ಖ್ಯಾತಿಗೆ ಕಾರಣವಾಗಿದ್ದಾರೆ. ಕುಷ್ಟಗಿ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ಕೊಪ್ಪಳ ಜಿಲ್ಲೆಯಲ್ಲಿದ್ದರು ಕೂಡಾ ಮುಂಬಯಿ ಕರ್ನಾಟಕದ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಪಾರಂಪರಿಕ ಕೊಡುಗೆ ಬಹಳಷ್ಟಿದೆ. ಇಲ್ಲಿ ಹಣ, ಜಾತಿ ಇತ್ಯಾದಿಗಳ ಆಟ ನಡೆಯದಿರುವುದು ಬಹಳಷ್ಟು ಕಡಿಮೆ ಎಂಬ ರಾಜಕೀಯ ವಿಶ್ಲೇಷಣೆ ಸದಾ ಚಾಲ್ತಿಯಲ್ಲಿದೆ. ಈ ಸಲ ‘ಕುಷ್ಟಗಿ ಇತಿಹಾಸಕ್ಕೆ ಗೆಲವು ಆಗಲಿದಿಯೋ.. ಅಥವಾ ಸೋಲಾಗಲಿದಿಯೋ… ಎಂಬುದನ್ನು ಕಾದು ನೋಡಬೇಕಾಗಿದೆ.

ಕೊಪ್ಪಳ : ಎರಡು ಬಾರಿ ಬಿಜೆಪಿ ಟಿಕೇಟ್ ವಂಚಿತ ನತದೃಷ್ಟ ರಾಜಕಾರಣಿ ಎಂದು ಕರೆಯಲ್ಪಡುವ ರಡ್ಡಿ ಸಮುದಾಯದ ಸಿ.ವಿ.ಚಂದ್ರಶೇಖರ ಅವರು ಈ ಸಾರಿ ಜೆಡಿಎಸ್ ಟಿಕೇಟ್ ಪಡೆದು ಕಣದಲ್ಲಿದ್ದಾರೆ. ಇಲ್ಲಿಯೂ ಕೂಡಾ ಇಲ್ಲಿಯವರೆಗೂ ಸಾಂಪ್ರದಾಯಿಕ ಎದುರಾಳಿ ಹಿಟ್ನಾಳ ಹಾಗೂ ಕರಡಿ ಕುಟುಂಬಗಳಿಗೆ ತ್ರಿಕೋನ ಸ್ಪರ್ಧೆಯಾಗಿ ಸಿವಿಸಿ ಎಂಬ ನಿವೃತ್ತ ಇಂಜಿನಿಯರ್ ತನ್ನ ಗೆಲುವಿಗಾಗಿ ‘ಪ್ಲಾನ್ ಎಂಡ್ ಎಸ್ಟೀಮೇಟ್’ ಸಿದ್ಧಪಡಿಸಿಕೊಂಡಿದ್ದಾರೆ. ಕೊಪ್ಪಳ ನಿರ್ಮಿತಿ ಕೇಂದ್ರದ ಮುಖ್ಯಸ್ಥರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಸಮಾಜ ಸೇವೆಗಾಗಿ ಇಲ್ಲಿಂದಲೇ ರಾಜಕೀಯ ಜೀವನ ಆರಂಭಿಸಿದ್ದಾರೆ. ಕಾಂಗ್ರೆಸ್ ನಿಂದ ಹಾಲುಮತ ಸಮುದಾಯದ ರಾಘವೇಂದ್ರ ಹಿಟ್ನಾಳ ಹಾಗೂ ಬಿಜೆಪಿಯಿಂದ ಪಂಚಮಸಾಲಿ ಸಮುದಾಯದ ಮಂಜುಳಾ ಅಮರೇಶ ಕರಡಿ ಅವರು ಸ್ಪರ್ಧೆಯಲ್ಲಿದ್ದಾರೆ. ರಾಜಕೀಯವನ್ನೇ ತಮ್ಮ ಜೀವಾಳ ಆಗಿಸಿಕೊಂಡ ಈ ಎರಡು ಕುಟುಂಬಗಳ ರಾಜಕೀಯವಾಗಿ ಅಪಾರ ಅನುಭವದ ಮುಂದೆ ಸಿವಿಸಿ ಅವರ ವಿನೂತನ ರಾಜಕೀಯ ಇಂಜನೀಯರ್ ಪ್ಲಾನ್ ಯಾವ ರೀತಿಯಲ್ಲಿ ವರ್ಕೌಟ್ ಆಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ..!!

ಇಬ್ಬರು ಆಯ್ಕೆ : 2018 ರಲ್ಲಿ ಇಬ್ಬರು ರಡ್ಡಿ ಸಮುದಾಯದ ಬಯ್ಯಾಪೂರು ಹಾಗೂ ಹಾಲಪ್ಪ ಆಚಾರ್ಯ ಜಿಲ್ಲೆಯಲ್ಲಿ ಶಾಸಕರಾಗಿ ಜಯಶಾಲಿಯಾಗಿದ್ದರು. ಅಲ್ಲದೆ, ಅರ್ಧ ಅವಧಿ ಆಚಾರ್ಯ ಅವರು ಸಚಿವರಾಗಿ ಆಡಳಿತದಲ್ಲಿದ್ದು ವಿಶೇಷ.

2023 ರಲ್ಲಿ..!? : 16 ನೇ ವಿಧಾನಸಭೆ ಚುನಾವಣೆಯಲ್ಲಿ ‘ರಡ್ಡಿ ಸಮುದಾಯದವರೇ ಆಗಿರುವ ಐವರು’ ಕೊಪ್ಪಳ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಂದ ಜಯಸಾಧಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಲಕ್ ಹೊಡೆದು, ನಾಲ್ಕು ಕ್ಷೇತ್ರಗಳಲ್ಲಿ ಇದೆ ಸಮುದಾಯದ ನಾಲ್ವರು ಜಯಶಾಲಿಯಾದರೇ..!? ಇದು ರಾಜ್ಯದ ಇತಿಹಾಸ ಪುಟದಲ್ಲಿ ಅಚ್ಚಳಿಯಾಗಿ ಉಳಿಯಲಿದೆ. ಯಾವುದಕ್ಕೂ 13 ನೇ ತಾರೀಖಿನವರೆಗೆ ಜಿಲ್ಲೆಯ ಮತದಾರ ಪ್ರಭುಗಳು ನೀಡುವ ಮತಗಳ ತಿರ್ಮಾನವನ್ನು ಕಾದು ನೋಡಬೇಕಾಗಿದೆ..!?