ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಇಡೀ ರಾಜ್ಯವನ್ನೇ ಗಮನ ಸೆಳೆದಿದ್ದ ಗಂಗಾವತಿ ವಿಧಾನಸಭಾದಿಂದ ಸ್ಪರ್ಧೆ ನೀಡಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನರೆಡ್ಡಿ ತಮ್ಮ ಫುಟ್ಬಾಲ್ ಗುರುತಿನ ಮೂಲಕ ಜಯಶಾಲಿಯಾಗಿದ್ದಾರೆ..!
ಹಣದ ಹೊಳೆಯನ್ನೇ ಹರಿಸುವ ಮೂಲಕ ಭತ್ತದ ನಾಡು ಗಂಗಾವತಿಯನ್ನು ಜನಾರ್ಧನರೆಡ್ಡಿ ಅವರು 66,213 ಮತಗಳಿಂದ ತಮ್ಮದಾಗಿಸಿಕೊಂಡಿದ್ದಾರೆ. ಇವರ ಗಣಿ ಹಣದ ಮುಂದೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಇಕ್ಬಾಲ್ ಅನ್ಸಾರಿ ಹಾಗೂ ಬಿಜೆಪಿಯಿಂದ ಸ್ಪರ್ಧೆ ನೀಡಿದ ಪರಣ್ಣ ಮುನವಳ್ಳಿ ಇವರಿಬ್ಬರ ಆಟ ಏನು ನಡೆಯದಂತಾಗಿದೆ. ಚುನಾವಣೆ ಘೋಷಣೆಯಾಗುವ ಮುನ್ನವೇ ತರಾತುರಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೆಸರಿನ ಮೇಲೆ ಗಂಗಾವತಿ ಕೇಂದ್ರ ಸ್ಥಾನವಾಗಿಸಿಕೊಂಡು ರಾಜಕೀಯ ಫುಟ್ಬಾಲ್ ಆಟ ನಡೆಸಿದ ಜನಾರ್ಧನರೆಡ್ಡಿ ಕಲ್ಯಾಣ ಕರ್ನಾಟಕದ ಕೆಲ ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಕ್ಯಾಪ್ಟನ್ ನಂತೆ 16 ನೇ ವಿಧಾನಸಭೆಗೆ (ಅಭ್ಯರ್ಥಿಗಳ ಜಯಕ್ಕಾಗಿ) ಗೋಲುಗಳಿಗಾಗಿ ಶ್ರಮವಹಿಸಿದ್ದರು.
ಬಹುತೇಕ ಕಡೆಗಳಲ್ಲಿ ಫುಟ್ಬಾಲ್ ಅಭ್ಯರ್ಥಿಗಳು ರಾಜಕೀಯ ಫುಟ್ಬಾಲ್ ಪರೀಕ್ಷೆ ಆಟದಲ್ಲಿ (ಮತಗಳನ್ನು ಪಡೆಯುವಲ್ಲಿ) ಮೂರರ ಸಂಖ್ಯೆ ಕೂಡಾ ದಾಟಲಿಲ್ಲ. ಸ್ವತಃ ರೆಡ್ಡಿಯವರ ಧರ್ಮ ಪತ್ನಿ ಅರುಣಾ ಲಕ್ಷ್ಮೀ ಬಳ್ಳಾರಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕೆಲವರು ಪಾರ್ಟಿ ನೀಡುವ ಹಣಕ್ಕಾಗಿ ಸ್ಪರ್ಧೆ ನೀಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ, 16 ನೇ ವಿಧಾನಸಭೆಯೊಳಗೆ ಫುಟ್ಬಾಲ್ ಚೆಂಡಿನೊಂದಿಗೆ ಆಟವಾಡಲು ತಂಡದ ಕ್ಯಾಪ್ಟನ್ ಗಾಲಿ ಜನಾರ್ಧನರೆಡ್ಡಿ ಅವರೊಬ್ಬರು ಮಾತ್ರ ಆಯ್ಕೆಯಾಗಿದ್ದು ರಾಜಕೀಯ ಹಾಗೂ ಕ್ರೀಡಾಭಿಮಾನಿಗಳಿಗೆ ಬೇಸರ ತರಿಸಿದೆ..!!