ಬಸ್ ನಿಲ್ದಾಣವನ್ನೇ ಮನೆಮಾಡಿಕೊಂಡ ನಿರ್ಗತಿಕ ಕುಟುಂಬ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಈ ಕುಟುಂಬಕ್ಕೆ ಬಸ್ ನಿಲ್ದಾಣವೇ ವಾಸಕ್ಕೆ ಮನೆಯಾಗಿದೆ. ಈ ವಿಶಿಷ್ಟ ಸ್ಟೋರಿ ನಿಮಗಾಗಿ ಇಲ್ಲಿದೆ ನೋಡಿ..!

ವಾಸಕ್ಕೆ ಮನೆ ಇಲ್ಲದೆ, ಅನಾಥವಾಗಿರುವ ಕುಟುಂಬವೊಂದು ಕಳೆದ ಒಂದು ವಾರದಿಂದ ಜಿಲ್ಲೆಯ ಕುಷ್ಟಗಿ ಪಟ್ಟಣದ ಮುಖ್ಯ ಬಸ್ ನಿಲ್ದಾಣವನ್ನು ಸೂರಾಗಿಸಿಕೊಂಡಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವಂತಾಗಿದೆ.

ಫಾತಿಮಾ ಎಂಬ ಮಹಿಳೆ ಆನಾರೋಗ್ಯದಲ್ಲಿರುವ ಹುಸೇನಬೀ ಎಂಬ ಅಂಧ ವೃದ್ಧ ತಾಯಿಯ ಜೊತೆಗೆ ಸಾರಿಗೆ ಇಲಾಖೆ ಬಸ್ ನಿಲ್ದಾಣದಲ್ಲಿ ನೆಲೆಸಿರುವ ನಿರ್ಗತಿಕ ಕುಟುಂಬವಿದು.

ಈ ಕುರಿತು ಫಾತಿಮಾ ಅವರನ್ನು ವಿಚಾರಿಸಿದಾಗ, ಪಟ್ಟಣದ ಮೂಲ ನಿವಾಸಿಗಳು ಎಂದು ಹೇಳುತ್ತಿರುವ ಈ ನಿರ್ಗತಿಕ ಕುಟುಂಬ ಪಡಿತರ ಚೀಟಿ ಹೊಂದಿದ್ದಾರೆ, ಸ್ವಂತ ಮನೆ ಹೊಂದಿಲ್ಲ. ಇಲ್ಲಿಯವರೆಗೂ ಇಲ್ಲಿನ ಹಳೇಬಜಾರ ಮುಲ್ಲಾರ ಓಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡಿ ಬದುಕು ನಡೆಸುತಿದ್ದ ಫಾತಿಮಾ ಹಾಗೂ ಆಕೆಯ ತಾಯಿಯನ್ನು ಮನೆಯ ಮಾಲಿಕರು ಏಕಾಏಕಿ ಆಚೆ ಹಾಕಿದ್ದರ ಹಿನ್ನೆಲೆಯಲ್ಲಿ ಗೃಹಬಳಕೆ ವಸ್ತುಗಳೊಂದಿಗೆ ಬಸ್ ನಿಲ್ದಾಣದಲ್ಲಿ ಬಂದು ನೆಲೆಸಿದ್ದೇವೆ. ಸಧ್ಯ ಸಾರಿಗೆ ಇಲಾಖೆ ಅಧಿಕಾರಿಗಳು ತೊಂದರೆ ನೀಡದೆ ಸಹಕರಿಸಿದ್ದಾರೆ. ಬಂಧು ಬಳಗ ಯಾರು ಇಲ್ಲ ಎಂದು ಕಣ್ಣೀರು ತೆಗೆದ ಆ ನೊಂದ ಮಹಿಳೆ, ಯಾರಾದರೂ ನೆಲೆಸಲು ಮನೆ ನೀಡಿದರೆ ಮತ್ತೆ ದುಡಿಮೆಗೆ ತೆರಳಿ ತಾಯಿಯನ್ನು ಸಲಹುತ್ತೇನೆ ಎಂದು ಅಂಗಲಾಚುತ್ತಿದ್ದಾಳೆ.
ಮುಂದುವರಿದ ಈ ನಾಗರಿಕ ಸಮಾಜದಲ್ಲಿ ಉಳ್ಳವರು, ಸಂಘ-ಸಂಸ್ಥೆಗಳು ಯಾರಾದರೂ ಈ ನಿರ್ಗತಿಕ ಕುಟುಂಬದ ನೆರವಿಗೆ
ಮುಂದಾಗಬೇಕು. ಭವ್ಯ ಭಾರತ ದೇಶದಲ್ಲಿ ಅದೆಷ್ಟೋ ಕುಟುಂಬಗಳು ಈ ರೀತಿಯ ಕಿತ್ತು ತಿನ್ನುವ ಬಡತನದ ನೋವಿನಲ್ಲಿ ಬಳಲದಿರಲಿ ಎಂಬುದು ನಮ್ಮ ‘ಕೃಷಿ ಪ್ರಿಯ’ ಪತ್ರಿಕೆಯ ಆಶಯ..!!