ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ರೈತ ಸಂಪರ್ಕ ಕೇಂದ್ರದ ಮುಂದೆ ಬಿತ್ತನೆ ಬೀಜಕ್ಕಾಗಿ ಉರಿ ಬಿಸಿಲಿನಲ್ಲಿ ಕಾದು ಕುಳಿತಿರುವ ರೈತರು, ಬೀಜ ವಿತರಣೆಯಲ್ಲಿ ವಿಳಂಬ ಮಾಡುತ್ತಿರುವ ಸಿಬ್ಬಂದಿ ನಡೆಗೆ ಬೇಸತ್ತು ಆಕ್ರೋಶಗೊಂಡ ಪ್ರಸಂಗ ಇಂದು ಬುಧವಾರ ನಡೆಯಿತು.!
ತಾಲೂಕಿನಲ್ಲಿ ಮಳೆಯಾಗವ ಲಕ್ಷಣ ಹಿನ್ನೆಲೆಯಲ್ಲಿ. ರೈತರು ಸಹ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಭೂಮಿ ಹಸಿ ಇರುವಾಗಲೇ ಬೀಜ ಬಿತ್ತನೆಗೆಂದು ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದಿದ್ದಾರೆ. ಮಂಗಳವಾರದಿಂದ ಬಿತ್ತನೆ ಬೀಜ ವಿತರಣೆಗೆ ಮುಂದಾಗಿರುವ ಕೃಷಿ ಇಲಾಖೆ. ಹೊಸತಾಗಿ ಬೀಜದ ಪಾಕೀಟ್ ಮೇಲಿನ ದರ ಆನ್ಲೈನ್ ಜನರೇಟ ಮಾಡಲು ಪಾಕೀಟ್ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನಿಂಗ್’ಗೆ ಮುಂದಾಗಿದ್ದರಿಂದ ರೈತರಿಗೆ ಬೀಜ ವಿತರಣೆಯಲ್ಲಿ ವಿಳಂಭವಾಗುತ್ತಿದೆ.
ಜೊತೆಗೆ ನಿನ್ನೆಯಿಂದ ತೊಗರಿ ಬೀಜ, ಹೆಸರು ಬೀಜ ಮಾತ್ರ ವಿತರಿಸುತ್ತಿದೆ. ಇನ್ನುಳಿದ ಶೇಂಗಾ ಬೀಜ, ಮೆಕ್ಕೆಜೋಳ ಬೀಜ ಸೇರಿದಂತೆ ಇತರೆ ಬೀಜಕ್ಕಾಗಿ ಬಂದವರನ್ನು ಮರಳಿ ಕಳುಹಿಸುತ್ತಿದ್ದಾರೆ. ಮತ್ತೊಂದೆಡೆ ಬೀಜ ಪಡೆಯಬೇಕಾದರೆ ಮೊದಲಿಗೆ ರೈತರು ತಮ್ಮ ದಾಖಲೆಗಳನ್ನು ತಂದು ಇಂಡೆಂಟಿ ಮಾಡಿಸಬೇಕಾಗಿದ್ದು, ಇಂಡೆಂಟಿಗಾಗಿ ಕೇಂದ್ರದ ಮುಂದೆ ನೆಲದ ಮೇಲೆ ಪಹಣಿ, ಆಧಾರ ಕಾರ್ಡನ್ನು ಪಾಳೆ ಹಚ್ಚಿ ಗಂಟೆಗಟ್ಟಲೆ ಕಾಯ್ದು ಕುಳಿತಿದ್ದಾರೆ. ದಾಖಲೆ ದೃಢಿಕರಿಸುವ ಸಿಬ್ಬಂದಿ ಮದ್ಯಾಹ್ನ ಊಟಕ್ಕೆ ಹೋದವರು 3,30ರ ಸಮಯವಾದರೂ ಬಾರದ ಹಿನ್ನೆಲೆ ರೋಸಿ ಹೋದ ರೈತರು, ಈಗಾಗಲೇ ಬಿತ್ತನೆ ಮಳೆ ಕಳೆದುಕೊಂಡಿದ್ದೆವೆ. ಭೂಮಿ ಹಸಿ ಇರುವಾಗಲೇ ಬಿತ್ತನೆ ಮಾಡಬೇಕೆಂದರೆ ರೈತ ಸಂಪರ್ಕ ಕೇಂದ್ರದವರು ವಿಳಂಬ ನೀತಿ ತೋರುತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಶೇಂಗಾ ಬೀಜ, ಮೆಕ್ಕೆಜೋಳದ ಬೀಜಕ್ಕಾಗಿ ಆಗಮಿಸಿದ ರೈತರು ಬೀಜ ವಿತರಿಸದ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಖಾಲಿ ಕೈಯಲ್ಲಿ ಹಿಂತಿರುಗಿದರು.
ತಾಲೂಕಿನ ಕೆಲ ಹೋಬಳಿಗಳಲ್ಲಿ ಬಿತ್ತನೆಗೆ ಅನುಕೂಲವಾಗುವಷ್ಟು ಮಳೆಯಾಗಿದೆ. ಭೂಮಿ ಹಸಿಯಿರುವಾಗಲೇ ಬೀಜ ಬಿತ್ತನೆಗೆ ಮುಂದಾಗಬೇಕೆಂದಿರುವ ರೈತರ ಕಷ್ಟ ಕೃಷಿ ಇಲಾಖೆ ಅಧಿಕಾರಿಗಳು ಅರಿತು ಬೇಗ ಬೀಜವಿತರಣೆಗೆ ಮುಂದಾಗಬೇಕಿದೆ.!