ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಬಡ ಮತ್ತು ಕೂಲಿ ಕಾರ್ಮಿಕರ ಕುರಿ ಮತ್ತು ಆಡುಗಳ ಆಕಸ್ಮಿಕ ಸಾವಿಗೆ 5 ಸಾವಿರ ರೂಪಾಯಿಗಳಿಗೆ ಆಧಾರವಾಗಿದ್ದ ‘ಅನುಗ್ರಹ ಕೊಡುಗೆ’ ಎಂಬ ಯೋಜನೆ ನಿಂತು ಹೋಗಿದೆ. ಆದರೆ, ಟಗರು ‘ಪ್ರಿಯ’ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಪುನಃ ಈ ಕಾರ್ಯಕ್ರಮವನ್ನು ಜಾರಿ ತರಲಿದ್ದಾರೆ ಎಂಬ ನಂಬಿಕೆಯಲ್ಲಿ ರಾಜ್ಯದ ಕುರಿಗಾರರಿದ್ದಾರೆ..!?
ವಿಚಿತ್ರ ಕಾಯಿಲೆಗಳಿಂದ ಆಕಸ್ಮಿಕವಾಗಿ ಮರಣಹೊಂದುತ್ತಿರುವ ಕುರಿ ಮತ್ತು ಆಡುಗಳಿಗೆ ಈ ವಿಶಿಷ್ಟ ಯೋಜನೆ ಮೂಲಕ ಸಾವನ್ನಪ್ಪಿದ ಲಕ್ಷಾಂತರ ಕುರಿ ಹಾಗೂ ಆಡುಗಳಿಗೆ ಪರಿಹಾರವನ್ನು ಇಲ್ಲಿಯವರೆಗೂ ಕುರಿಗಾರರು ಪಡೆದುಕೊಂಡಿದ್ದರು. ಅಷ್ಟೇ, ಅಲ್ಲ ಆರ್ಥಿಕ ನೆರವಿಗೆ ಕಾರಣವಾಗಿ ಕುರಿಗಾರರಿಗೆ ಈ ಯೋಜನೆ ಜೀವಾಳ ಕೂಡಾ ಆಗಿತ್ತು. ಆದರೆ, ಕುರಿಗಾಯಿಗಳ ಈ ಆಕರ್ಷಕ ಯೋಜನೆಯನ್ನು ಕಳೆದ ಬಿಜೆಪಿ ಸರಕಾರ ತನ್ನ ಕೊನೆಯ ಬಜೇಟ್ ನಲ್ಲಿ ಏಕೋ.. ಏನೋ.. ಕೈಬಿಡಲಾಗಿತ್ತು. ಅಲ್ಲದೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕುರಿಗಾರರಿಂದ ಪರಿಹಾರದ ಯಾವುದೇ ಅರ್ಜಿ ಸ್ವೀಕರಿಸದಂತೆ ದಿನಾಂಕ 08-05-2023 ರಂದು ರಾಜ್ಯದ ಎಲ್ಲಾ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಸ್ಪಷ್ಟ ಸಂದೇಶ ನೀಡಿದ್ದರು. ಆದ್ರೂ ಕೂಡಾ ಪರಿಹಾರ ನೆಚ್ಚಿಕೊಂಡು ನಿತ್ಯ ಕುರಿಗಾರರು ತಮ್ಮ ಕುರಿಗಳನ್ನು ಹೊತ್ತುಕೊಂಡು ಪಶು ಆಶ್ಪತ್ರೆಗಳಿಗೆ ನಿತ್ಯದ ಅಲೆದಾಟ ಮಾತ್ರ ನಿಂತಿಲ್ಲ.
ಒತ್ತಾಯ : ನಿತ್ಯ ಒಂದಿಲ್ಲೊಂದು ರೋಗಗಳಿಂದ ರಾಜ್ಯದಲ್ಲಿ ಸಾವನ್ನಪ್ಪುವ ಕುರಿ ಮತ್ತು ಆಡುಗಳ ಪರಿಹಾರಕ್ಕಾಗಿ ರಾಜ್ಯದಲ್ಲಿ ವಿಶೇಷವಾಗಿ ಸಂಚಾರಿ ಕುರಿಗಾರರು ಅಂಗಲಾಚುತ್ತಿದ್ದಾರೆ. ಮತ್ತೇ ರಾಜ್ಯದಲ್ಲಿ ‘ಅನುಗ್ರಹ ಕೊಡುಗೆ’ ಯೋಜನೆ ಯಾವಾಗ ಜಾರಿಗೆ ಬರುತ್ತದೆ ಎಂದು ಎದುರು ನೋಡುತ್ತಿದ್ದಾರೆ..!!
ಚಿತ್ರ ಕೃಪೆ : ಸತೀಶ ಬಿ.ಎಂ,
ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರು, ಕೊಪ್ಪಳ.