ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ರಾಜ್ಯದಲ್ಲಿ ಬರಗಾಲದ ಮುನ್ಸೂಚನೆ ಕಂಡುಬರುತ್ತಿದೆ..!
ರಾಜ್ಯದಲ್ಲಿ ವಾಡಿಕೆ ಮಳೆಗಿಂತಲೂ ಅತ್ಯಂತ ತೀರಾ ಕಡಿಮೆ ಪ್ರಮಾಣದಲ್ಲಿ ಈ ಮುಂಗಾರಿನಲ್ಲಿ ಮಳೆ ದಾಖಲಾಗಿದೆ. ವಿಶೇಷವಾಗಿ ಬಿತ್ತನೆಗೆ ಶ್ರೇಷ್ಠ ತಥಿಯ ರೋಹಿಣಿ ಮಳೆ ಬಹುತೇಕ ಕಡೆಗಳಲ್ಲಿ ಸುರಿಯಲಿಲ್ಲ. ಬಿತ್ತನೆಯ ಬೀಜ ಮಳೆ (ಗಂಡು ಮಳೆ) ಕೈಕೊಟ್ಟಿದ್ದು ರೈತರಲ್ಲಿ ಎದೆ ನಡುಕ ಹುಟ್ಟಿಸಿದೆ. ಇಲ್ಲಿಯವರೆಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿತ್ತನೆಯ ಪೂರ್ವ ಕೃಷಿ ಚಟುವಟಿಕೆಗಳು ಜರುಗಿಲ್ಲ. ಇದನ್ನೆಲ್ಲಾ ಗಮನಿಸಿದರೆ.. ಈ ವರ್ಷದ ಮುಂಗಾರು ಹಂಗಾಮು ಹಿನ್ನಡೆಯಾಗುವ ಬಹುತೇಕ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಜೊತೆಗೆ ರಾಜ್ಯದ ರೈತರಿಗೆ ಮತ್ತೊಮ್ಮೆ “ಬರಗಾಲದ” ಬಿಸಿ ಮುಟ್ಟುವುದು ಗ್ಯಾರಂಟಿ ಆಗಿದೆ.
ವಾಡಿಕೆಗಿಂತ ಕಡಿಮೆ ಮಳೆ :
ಚಿತ್ರದುರ್ಗ ಶೇ.(-24), ದಾವಣಗೆರೆ ಶೇ(-23), ವಿಜಯಪುರ ಶೇ(-21), ಕೊಪ್ಪಳ ಶೇ(-22), ಬಾಗಲಕೋಟೆ ಶೇ(-24), ಗದಗ ಶೇ(-37), (ಮಲೆನಾಡು ಪ್ರದೇಶಕ್ಕೊಳಪಡುವ) ಶಿವಮೊಗ್ಗ ಶೇ(-22), ಮಂಗಳೂರು ಶೇ(-41) ಜಿಲ್ಲೆಗಳಲ್ಲಿ ವರ್ಷದ ಮುಂಗಾರಿನಲ್ಲಿ ವಾಡಿಕೆಗಿಂತ ‘ಕಡಿಮೆ’ ಮಳೆ ಸುರಿದಿರುವುದು ದಾಖಲಾದರೆ, (ಕರಾವಳಿ ತೀರ ಪ್ರದೇಶಗಳಾದ) ಉಡುಪಿ ಶೇ(-73) ಹಾಗೂ ಕಾರವಾರ (ಶೇ-60) ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ‘ತೀರಾ ಕಡಿಮೆ’ ಪ್ರಮಾಣದಲ್ಲಿ ಮಳೆ ದಾಖಲಾಗಿರುವ ಶೇಕಡಾ ಮೈನ್ಸ್ ಅಂಕೆಗಳನ್ನು ಗಮನಿಸಿದ್ದಾದರೆ ಬರಗಾಲ ನಿಶ್ಚಿತವಾದಂತಾಗಿದೆ.
ಕೈಕೊಟ್ಟ ಬೀಜ ಮಳೆ :
ಕಡಿಮೆ ಅವಧಿಯಲ್ಲಿ ಭೂಮಿಯನ್ನು ಹದಗೊಳಿಸಿಕೊಂಡು ರೋಹಿಣಿ ಮಳೆಗೆ ಬಿತ್ತನೆ ಕೈಗೊಳ್ಳುವುದು ಕೃಷಿಕರಿಗೆ ರೂಢಿ ಮತ್ತು ಸೂಕ್ತ ಸಮಯ ಕೂಡಾ ಹೌದು. ಇಂತಹ ಮಹತ್ವದ ಬೀಜ ಮಳೆ ಕೈಕೊಟ್ಟಿರುವುದು ರೈತರನ್ನು ದಿಗಭ್ರಮೆಗೊಳಿಸಿದೆ. ಕೊಪ್ಪಳ, ಗದಗ, ಬಾಗಲಕೋಟೆ ಇನ್ನಿತರ ಜಿಲ್ಲೆಗಳಲ್ಲಿ ಈ ವರ್ಷದ ಮುಂಗಾರಿನಲ್ಲಿ ‘ಹೆಸರು’ ಬಿತ್ತನೆಯಾಗಲಿಲ್ಲ. ಅದರ ತಥಿ ಕೂಡಾ ಮುಗಿದುಹೋಗಿ, ಮುಂಗಾರಿನಲ್ಲಿಯೇ ಮೊದಲು ಪೀಕು (ಪೈರು) ಮರೆಮಾಚಿಹೋದಂತಾಗಿದೆ.
(ಕೊಪ್ಪಳ ಹಿರೇಹಳ್ಳದ ಜಲಾಶಯ ಸ್ಥಿತಿ)
ಗ್ಯಾರಂಟಿಗಳಲ್ಲಿಯೇ ಲೀನವಾದ ಸರಕಾರ :
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ತಾನು ಘೋಷಿಸಿಕೊಂಡ ಐದು ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಬ್ಯೂಜಿಯಾಗಿದೆ. ಆದರೆ, ಬರಗಾಲದ ಮುನ್ಸೂಚನೆಯಲ್ಲಿರುವ ರೈತರ ಕಡೆಗೆ ಈ ಸರಕಾರದ ಖ್ಯಾಲ ಇಲ್ಲದಂತಾಗಿದೆ. ಆದರೆ, ಮಳೆ ಆಗದಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತನ ಗೋಳು ಹೇಳ ತೀರದಾಗಿದೆ. ಮಳೆಯಿಲ್ಲದೆ ಬರಗಾಲದ ಬರೆಯನ್ನು ರೈತ ಕುಟುಂಗಳು ಎದುರು ನೋಡುವಂತಾಗಿದೆ.
ಅನ್ನದಾತರನ್ನು ಮರೆಯಬಾರದು ಎಚ್ಚರಿಕೆ..!? :
ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ರಾಜಕೀಯ ಮಾಡಿಕೊಳ್ಳದೆ, ಇನ್ನೂ ಕಾಲ ಮಿಂಚುವ ಮುನ್ನವೇ ರೈತ ಪರ ಚಿಂತನೆಮಾಡಬೇಕಾಗಿದೆ. ಬರಗಾಲದ ಮುನ್ಸೂಚನೆಯಲ್ಲಿರುವ ಕೃಷಿಕರ ಪರ ಶೀಘ್ರದಲ್ಲೇ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕಾಗಿರುವುದು ಬಾಕಿ ಇದೆ. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಸರಕಾರಗಳು ತಕ್ಕ ಪಾಠ ಕಲಿಯಬೇಕಾಗುತ್ತದೆ ಎಚ್ಚರಿಕೆ..!?
ಚಿತ್ರ ಕೃಪೆ : ಸತೀಶ ಬಿ.ಎಂ,ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರು, ಕೊಪ್ಪಳ.