ಕೃಷಿ ಪ್ರಿಯ ನ್ಯೂಸ್ |
ಸಂಗಮೇಶ ಮುಶಿಗೇರಿ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಳೆದ ಏಳು ದಿನಗಳಿಂದ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆಗೆ ದಾಖಲಾಗಿದ್ದವರ ಪೈಕಿ ಒಬ್ಬ ಬಾಲಕಿ ಇಂದು ಮೃತಪಟ್ಟಿದ್ದಾಳೆ.!
ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಬಿಜಕಲ್ ಗ್ರಾಮದ 9 ವರ್ಷದ ನಿರ್ಮಲಾ ತಂದಿ ವೀರಪ್ಪ ನೀರಲೂಟಿ ಮೃತ ದುರ್ದೈವಿ ಬಾಲಕಿ.
ಮೃತಳ ತಂದೆ-ತಾಯಿ ಕೇರಳಕ್ಕೆ ದುಡಿಮೆ ಅರಸಿ ಗುಳೇ ಹೋಗಿದ್ದಾರೆ. ಅತ್ತೆಯ ಜೊತೆಗೆ ಬಿಜಕಲ್ ಗ್ರಾಮದಲ್ಲಿ ನೆಲೆಸಿದ್ದ ಬಾಲಕಿ, ಹೆಸರೂರು ಗ್ರಾಮದ ಶಾಲೆಯಲ್ಲಿ 3ನೇ ತರಗತಿ ಓದುತಿದ್ದಳು. ಗ್ರಾಮದಲ್ಲಿ ಬುಧವಾರ ರಾತ್ರಿ ಕಲುಷಿತ ನೀರು ಸೇವಿಸಿ ಏಕಾಏಕಿ ವಾಂತಿ – ಬೇಧಿಗೆ ಒಳಗಾಗಿ ತೀವ್ರ ಅಸ್ವಸ್ಥಳಾದ ಬಾಲಕಿಯನ್ನು ಚಿಕಿತ್ಸೆ ಕೊಡಿಸಲು ಕುಷ್ಟಗಿ ಆಸ್ಪತ್ರೆಗೆ ಬಾಲಕಿ ಅತ್ತೆ ಹನುಮವ್ವ ಭರಮಣ್ಣವರ ದಾಖಲಿಸಿದ್ದಳು. ಆದರೆ, ವೈದ್ಯರು ನೀಡಿದ ಚಿಕಿತ್ಸೆ ಫಲಿಸದೇ ಬಾಲಕಿ ಬೆಳಿಗ್ಗೆ ಅಸುನೀಗಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ..!!
ಈಗಾಗಲೇ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಬೇಧಿಯಿಂದ 50ಕ್ಕೂ ಹೆಚ್ಚು ಗ್ರಾಮಸ್ಥರು ಸಾರ್ವಜನಿಕ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇಂದು ಚಿಕಿತ್ಸೆ ಫಲಕಾರಿಯಾಗದೆ ವಾಂತಿ-ಬೇಧಿಗೆ ತಾಲೂಕಿನಲ್ಲಿ ಇದು ಮೊದಲನೇ ಬಲಿಯಾಗಿದೆ.!!