ಕೃಷಿ ಪ್ರಿಯ ನ್ಯೂಸ್ |
ಸಂಗಮೇಶ ಮುಶಿಗೇರಿ
ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ವಾಂತಿ-ಬೇಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಜೆಎಂ ಕಾಮಗಾರಿ ಗುತ್ತಿಗೆದಾರ, ಪಿಡಿಓ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪಿಆರ್’ಡಿ ಇಂಜಿನಿಯರ್ ಮೇಲೆ ಕ್ರಮ ಜರುಗಿಸುವುದಾಗಿ ಜಿ.ಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ತಿಳಿಸಿದ್ದಾರೆ..!
ಕಲುಷಿತ ನೀರು ಸೇವಿಸಿ ವಾಂತಿ ಬೇಧಿಯಿಂದ ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಲು ತೆರೆಯಲಾಗಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಶುಕ್ರವಾರ ಸಂಜೆ ಐದುಗಂಟೆ ಸುಮಾರಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ
ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿ, ಪ್ಲೋರೈಡ್ ಯುಕ್ತ ನೀರು ಸೇವನೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ವಾಂತಿ-ಬೇಧಿ ಕಾಣಿಸಿಕೊಳ್ಳುತ್ತದೆ. ವಯೋವೃದ್ಧರು ಹಾಗೂ ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಕುದಿಸಿ ಆರಿಸಿದ ನೀರನ್ನೇ ಸೇವಿಸಬೇಕು. ಪರಿಸರ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ಲೈನ್’ಗಳು ಒಡೆದಿವೆ. ಚರಂಡಿ ನೀರು ಬೆರೆತು ಕುಡಿಯುವ ನೀರು ಕಲುಷಿತಗೊಳ್ಳುತ್ತಿವೆ. ಈ ಕುರಿತು ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತಂದರೂ ನಿಷ್ಕಾಳಜಿ ತೋರಿದರು. ಜೆಜೆಎಂ ಕಾಮಗಾರಿ ಕಳಪೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಸಿಇಓ, ಗ್ರಾಮದಲ್ಲಿ ಸಂಚರಿಸಿ ಜೆಜೆಎಂ ಕಳಪೆ ಕಾಮಗಾರಿ ಹಾಗೂ ಪಿಆರ್’ಡಿ ಪೈಪ್ಲೈನ್ ಪರಿಶೀಲನೆ ನಡೆಸಿದರು. ಪೈಪ್ಲೈನ್ ಅವಸ್ಥೆ ಕಂಡು ಜೆಜೆಎಂ ಕಾಮಗಾರಿ ಗುತ್ತಿಗೆದಾರ ವೀರಯ್ಯ ಹಿರೇಮಠ, ಪಿಡಿಓ ನಾಗೇಶ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪಿಆರ್’ಡಿ ಇಂಜಿನಿಯರ್ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದರು.
ತಾಲೂಕು ಪಂಚಾಯಿತಿ ಇಓ ಶಿವಪ್ಪ ಸುಭೇದಾರ, ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ವಿ ಹಿರೇಹಾಳ ಇತರರು ಉಪಸ್ಥಿತರಿದ್ದರು..!!