ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಪ್ರವಾಸದಲ್ಲಿದ್ದಾರೆ. ಇನ್ನೂ ಮೀಸಲಾತಿ ನಿಗದಿ ಆಗಿಲ್ಲ. ಆದ್ರೆ, ತಮ್ಮ ಬಣದಲ್ಲಿನ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿಸುವ ಹಂಬಲದಲ್ಲಿ ಸದಸ್ಯರು ಮಾತ್ರ ಪ್ರವಾಸದ ಮಜಾದಲ್ಲಿರುವುದು ವಿಶೇಷ..!
ಜಿಲ್ಲಾಡಳಿತ ದಿನಾಂಕ 16-06-2023 ರಂದು ಕುಷ್ಟಗಿ ತಾಲೂಕಿನ 36 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬಾಕಿ ಉಳಿದ 30 ತಿಂಗಳ ಅವಧಿಗೆ ಮೀಸಲಾತಿ ಘೋಷಿಸಲು ದಿನಾಂಕ ಮತ್ತು ಸ್ಥಳ ನಿಗದಿಪಡಿಸಿದೆ. ಇದಕ್ಕೂ ಮೊದಲೇ ತುಗ್ಗಲಡೋಣಿ ಗ್ರಾಮ ಪಂಚಾಯತಿಯ ಶಾಡಲಗೇರಿ, ಮಿಟ್ಟಲಕೋಡ ಹಾಗೂ ನೀರಲಕೊಪ್ಪ ಗ್ರಾಮಗಳ ಸದಸ್ಯರು ಈಗಾಗಲೇ ಪ್ಲಾನ್ ಮಾಡಿಕೊಂಡು ಪ್ರವಾಸದ ಮೊಜಿನಲ್ಲಿದ್ದಾರೆ. ಪ್ರವಾಸದಲ್ಲಿರುವ ಒಂದು ಬಣದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಸದಸ್ಯರೊಬ್ಬರನ್ನು ಹೊರತುಪಡಿಸಿ, ಮಿಕ್ಕೆಲ್ಲಾ ಸಮುದಾಯದ ಸದಸ್ಯರುಗಳು ಇದ್ದಾರೆ ಎಂಬುದು ಪಕ್ಕಾ ಆಗಿದೆ. ವರ್ಷದ ಹಿಂದೆಯೇ ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸಗೊಳಿಸುವುದಕ್ಕೆ ಒಗ್ಗಟ್ಟಾಗಿ ಪ್ರವಾಸ ತೆರಳಿ, ವಿಫಲರಾಗಿದ್ದರು ಎಂದು ತಿಳಿದು ಬಂದಿದೆ. ಚುನಾವಣೆ ವಿಷಯದಲ್ಲಿ ಸದಾ ಸುದ್ದಿಯಲ್ಲಿರುವ ತುಗ್ಗಲಡೋಣಿ ಗ್ರಾಮ ಪಂಚಾಯತಿ ವಿಷಯ ಯಾವ ಹಂತ ಬಂದು ತಲುಪಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ..!?
ಕುಷ್ಟಗಿ ತಾಲೂಕಿನ ನಿಲೋಗಲ್ , ಹಾಬಲಕಟ್ಟಿ ಹಾಗೂ ಜಾಗೀರಗುಡದೂರು ಗ್ರಾಮ ಪಂಚಾಯತಿಯ ಕಾಂಗ್ರೆಸ್ ಪಕ್ಷದ ಗುಂಪಿಗೆ ಸೇರಿದ ಸದಸ್ಯರು ಕೂಡಾ ಗ್ರಾಮಗಳನ್ನು ತೊರೆದು, ಬೇರೆಡೆಗೆ ಹೋಗಿರುವುದು ಗುಟ್ಟಾಗಿ ಉಳಿದಿಲ್ಲ. ಮೀಸಲಾತಿ ನಿಗದಿಯಾಗಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ಘೋಷಣೆ ದಿನಾಂಕವರೆಗೆ ಗ್ರಾಮಗಳಿಗೆ ಸದಸ್ಯರು ವಾಪಸ್ ಮರಳುವುದಿಲ್ಲ. ಗೌಪ್ಯ ಸ್ಥಳವೊಂದರಲ್ಲಿ ಸದಸ್ಯರು ಬಿಡಾರ ಹೂಡಿದ್ದಾರೆ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ.