ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಮೊದಲ ಬಲಿಯಾಗಿ ಕೊಪ್ಪಳ ಜಿಲ್ಲೆಯ ಇಬ್ಬರು ಪಿಡಿಓಗಳನ್ನು ಪಡೆದುಕೊಂಡಿದೆ..!?
ದಿನಾಂಕ 3-6-2023 ಮತ್ತು 8-6-2023 ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಹಾಗೂ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮಕ್ಕಳು ಅಸುನೀಗಿದ್ದವು. ಈ ಇಬ್ಬರು ಮಕ್ಕಳ ಸಾವಿನ ಸುದ್ದಿ ತಿಳಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಈ ಎರಡು ಪ್ರತ್ಯೇಕ ಪ್ರಕರಣಗಳನ್ನು ಬಹಳಷ್ಟು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಇತ್ತೀಚೆಗೆ ಸ್ವತಃ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಕೂಡಾ ನೀಡಿದ್ದರು. ಅಲ್ಲದೆ, ಪ್ರಕರಣ ಮರುಕಳಿಸಿದರೆ.. ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮದ ಎಚ್ಚರಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಕೂಡಾ ವೈರಲ್ ಆಗಿತ್ತು. ಆದರೆ, ಪ್ರಕರಣ ಜರುಗಿ 15 ದಿನಗಳ ಬಳಿಕ ಕೆಳಮಟ್ಟದ ಪಿಡಿಓಗಳ ಮೇಲೆ ಕ್ರಮ ಆಗಿದ್ದು ಜಿಲ್ಲೆಯ ತುಂಬೆಲ್ಲಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಘಟನೆ ಜರುಗಿದ ಎರಡು ಮೂರು ದಿನಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂಬ ಅಧಿಕಾರಿಗಳ ಮಾತುಗಳು ಜಾರಿಗೆ ಬಾರದಂತಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಂತಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಕನಿಷ್ಟ ಪಕ್ಷ ನೋಟೀಸ್ ನೀಡದಿರುವುದು ಮತ್ತೊಂದೆಡೆ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸ್ವಕ್ಷೇತ್ರದಲ್ಲಿ ನಡೆದಿರುವ ಘಟನೆಗೆ ಅವರ ಮೌನಕ್ಕೆ ಕಾರಣ ಗೊತ್ತಾಗಬೇಕಾಗಿದೆ. ಕೇವಲ ಇಬ್ಬರು ಪಿಡಿಓಗಳ ಮೇಲೆ ಆಗಿರುವ ಕ್ರಮಕ್ಕಂತು ನೌಕರ ವಲಯದಲ್ಲಿ ಅಸಮದಾನದ ಹೊಗೆ ಆಡುತ್ತಿದೆ..!?
ಅಮಾನತು : ಬಸರಿಹಾಳ ಗ್ರಾಮ ಪಂಚಾಯತಿ ಪಿಡಿಓ (ಪ್ರಭಾರಿ) ರವೀಂದ್ರ ಕುಲಕರ್ಣಿ ಹಾಗೂ ಬಿಜಕಲ್ ಗ್ರಾಮ ಪಂಚಾಯತಿ ಪಿಡಿಓ (ಪ್ರಭಾರಿ) ನಾಗೇಶ ಅರಳಿಗನೂರು ಇವರನ್ನು ಪಂಚಾಯತ್ ರಾಜ್ ಇಲಾಖೆ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ.