ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಅಂತರ್ಜಲ ಕುಸಿತವಾಗಿರುವ ಹಿನ್ನೆಲೆಯಲ್ಲಿ ಹತ್ತಿ ಬೆಳೆ ಬೆಳೆದ ರೈತನೊಬ್ಬ ಬೆಳೆ ಕಾಪಾಡಿಕೊಳ್ಳಲು ಟ್ಯಾಂಕರ್ ನೀರು ಮೊರೆ ಹೊಗಿದ್ದಾನೆ..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದ ಬಸವರಾಜ ಕರಡಿ ಎಂಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಕಳೆದ ಎರಡು ತಿಂಗಳುಗಳ ಹಿಂದೆ ಹತ್ತಿ ಬೀಜ ಊರಿದ್ದಾನೆ. ಸಧ್ಯ ಎರಡು ಅಡಿಯಷ್ಟು ಫಸಲು ಬೆಳೆದಿದ್ದು, ಇದ್ದ ಕೊಳವೆಬಾವಿಯ ಅಂತರ್ಜಲ ಬತ್ತಿದ ಪರಿಣಾಮ ಭೂಮಿಯಲ್ಲಿ ತೇವಾಂಶ ಇಲ್ಲದೇ ಬೆಳೆಗಳು ಬಾಡಲಾರಂಭಿಸಿವೆ. ಹೇಗಾದರು ಮಾಡಿ ಬೆಳೆ ಕಾಪಾಡಿಕೊಳ್ಳಲೇಬೇಕು ಎಂದು ಪ್ರತಿ ನಿತ್ಯ ಟ್ಯಾಂಕರ್ ನೀರನ್ನು ಡ್ರಿಪ್ ಮೂಲಕ ಬೆಳೆಗೆ ಹರಿ ಬಿಡುತ್ತಿದ್ದಾನೆ. ದಿನ ನಿತ್ಯ 6 ಟ್ಯಾಂಕರ್ ನೀರು ಹರಿಸುತ್ತಿದ್ದಾನೆ. ಬೇರೆಡೆಯಿಂದ ನೀರು ತರಲು ಟ್ಯಾಂಕರ್ ಬಾಡಿಗೆ ಸೇರಿ ಒಂದು ಟ್ಯಾಂಕರ್ ನೀರಿಗೆ ಸುಮಾರು 600 ರೂಪಾಯಿಗಳಷ್ಟು ಖರ್ಚು ಮಾಡುತ್ತಿರುವುದಾಗಿ ರೈತ ಬಸವರಾಜ ಕರಡಿ ಅಳಲು ತೋಡಿಕೊಂಡಿದ್ದಾನೆ. ಮಳೆ ಕೈಕೊಟ್ಟಿರುವುದರಿಂದ ಮುಂಗಾರು ಹಂಗಾಮಿನ ದಿನ ಕಳೆಯುತ್ತಿವೆಯೇ ಹೊರತು, ಮಳೆ ಬರುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಬಹುತೇಕ ಕಡೆ ಮಳೆಯನ್ನು ನಂಬಿಕೊಂಡು ಸಜ್ಜೆ, ನವಣೆ, ಎಳ್ಳು, ಜೋಳ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೀಜಗಳನ್ನು ಬಿತ್ತನೆ ಮಾಡಿರುವ ರೈತರ ಪರಿಸ್ಥಿತಿ ಹೇಳತೀರದಂತಾಗಿದೆ. ಆತಂಕಗೊಂಡಿರುವ ಹತ್ತಿ ಬೆಳೆಗಾರರು ಬೆಳೆಗಳನ್ನು ಉಳಿಸಿಕೊಳ್ಳಲು ತಕ್ಕ ಮಟ್ಟಿಗೆ ನೀರುಣಿಸುವ ಕಾರ್ಯ ಮಾಡುತ್ತ, ಮುಂದಿನ ಭಾರವನ್ನು ವರುಣನ ಮೇಲೆ ಹಾಕಿದ್ದಾರೆ..!!