“ಕೃಷಿ ಪ್ರಿಯ” ಸಂಪಾದಕ ಶರಣಪ್ಪ ಕುಂಬಾರ ಇನ್ನಿಲ್ಲ.!

 

ಕೃಷಿ ಪ್ರಿಯ ನ್ಯೂಸ್ |

ಸಂಗಮೇಶ ಮುಶಿಗೇರಿ.

ಕೊಪ್ಪಳ : ವಿಭಿನ್ನ ಬರವಣಿಗೆಯೊಂದಿಗೆ ಅಸಂಖ್ಯಾತ ಓದುಗ ದೊರೆಗಳನ್ನು ಸಂಪಾದಿಸಿದ್ದ ‘ಕೃಷಿ ಪ್ರಿಯ’ ಆನ್ಲೈನ್ ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತ ಶರಣಪ್ಪ ಕುಂಬಾರ (43)ಅವರು ದಿನಾಂಕ 5-07-2023ರಂದು ಬುಧವಾರ ರಾತ್ರಿ ಬಾರದ ಲೋಕಕ್ಕೆ ಪಯಣಿಸಿದರು.!


ಮೃತರು ತಾಯಿ, ಪತ್ನಿ ಹಾಗೂ ಓರ್ವ ಪುತ್ರ, ಸಹೋದರರು ಸೇರಿದಂತೆ ಬಂಧು ಮಿತ್ರರು, ಮಾಧ್ಯಮ ಸ್ನೇಹಿತ ಬಳಗವನ್ನು ಅಗಲಿದ್ದಾರೆ. ಮಧುಮೇಹ ಕಾಯಿಲೆಗೆ ಒಳಗಾಗಿದ್ದ ಅವರು ಎಂದಿನಂತೆ ಬುಧವಾರ ಸಂಜೆ ಸ್ವಗ್ರಾಮ ಹನುಮನಾಳದಲ್ಲಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥಕ್ಕೊಳಗಾದರು. ಕುಟುಂಬಸ್ಥರು ಚಿಕಿತ್ಸೆಗೆ ಬದಾಮಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಕ್ತದೊತ್ತಡ ಕಡಿಮೆ(ಲೋ ಬಿಪಿ)ಯಿಂದ ಕಾಲವಾದರು.

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಶರಣಪ್ಪ ಕುಂಬಾರ ಅವರು ಚಿಕ್ಕ ವಯಸ್ಸಿನಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಪ್ರತಿಭಾವಂತ ಕ್ರೀಡಾಪಟುವಾಗಿ ಗುರುತಿಸಿಕೊಂಡು ವಾಲಿಬಾಲ್ ಆಟದಲ್ಲಿ ಜಿಲ್ಲೆ, ರಾಜ್ಯ ಮಟ್ಟದ ಅನೇಕ ಪಂದ್ಯಾವಳಿಗಳಲ್ಲಿ ಆಡಿ ಗಮನಸೆಳೆದಿದ್ದರು. ಆದರೆ, ಭವಿಷ್ಯದಲ್ಲಿ ಆಟದ ಮೇಷ್ಟ್ರು ಆಗಬೇಕು ಎಂಬ ಕನಸು ಕಂಡಿದ್ದ ದೈಹಿಕ ಶಿಕ್ಷಣ ಪದವಿ ಪಡೆದರೂ ಕನಸುಕೈಗೂಡಲಿಲ್ಲ. ಆದಾಗ್ಯೂ ಕೆಲ ವಾಲಿಬಾಲ್ ತರುಬೇತುದಾರರಾಗಿದ್ದ ಶರಣಪ್ಪ ಅವರಿಗೆ ಪತ್ರಿಕೋದ್ಯಮದವರೊಂದಿಗೆ ಸ್ನೇಹ ಬೆಳೆದು ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಎಂಎ ಪತ್ರಿಕೋದ್ಯಮ ಪದವಿ ಪಡೆದುಕೊಂಡರು.

ಹೈದ್ರಾಬಾದ್ ರಾಮೋಜಿರಾವ್ ಈ ಟಿವಿ ಕನ್ನಡ ವಾಹಿನಿಗೆ ಕೃಷಿ ವರದಿಗಾರರಾಗಿ ಅನ್ನದಾತ ಕಾರ್ಯಕ್ರಮದ ಮೂಲಕ ವಿಭಿನ್ನ ವರದಿಗಳ ಮೂಲಕ ರಾಜ್ಯದಲ್ಲಿ ಚಿರಪರಿಚಿತರಾಗಿದ್ದರು. ಹಾವೇರಿ, ವಿಜಯನಗರ(ಹೊಸಪೇಟೆ) ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕನ್ನಡಪ್ರಭ, ನಾಗರಿಕ, ಉಷಾಕಿರಣ, ಉದಯವಾಣಿ, ವಿಶ್ವವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿಗಾರರಾಗಿ ಎರಡು ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.

ಕಳೆದ ಎರಡ್ಮೂರು ವರ್ಷಗಳಿಂದ ತಮ್ಮದೇ ಕೃಷಿಪ್ರಿಯ ಪತ್ರಿಕೆಯನ್ನು ಹುಟ್ಟುಹಾಕಿದ್ದ ಶರಣಪ್ಪ ಕುಂಬಾರ ಅವರು ಸಂಕಷ್ಟಕ್ಕೆ ಸಿಲುಕಿದ್ದ ಅನೇಕ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅನೇಕ ವಸ್ತುನಿಷ್ಠ ವರದಿಗಳು ಸೇರಿದಂತೆ ಸಾಮಾಜಿಕ, ಮಾನವೀಯ ಸುದ್ದಿಗಳನ್ನು ಬಿತ್ತರಿಸಿ ಸರ್ಕಾರದ ಕಣ್ತೆರೆಸಿದ್ದಾರೆ. ಹತ್ತಿ ಸೀಡ್ಸ್ ಕಂಪನಿಯಿಂದ ರಾಜ್ಯದ ರೈತರಿಗೆ ದೊಡ್ಡ ಮೋಸವಾಗುತ್ತಿರುವುದನ್ನು ಪತ್ತೆ ಹಚ್ಚಿದ ಸಂಪಾದಕ ಶರಣಪ್ಪ ಕುಂಬಾರ ಅವರು ಸರಣಿ ವರದಿ ಮಾಡುವ ಮೂಲಕ ಕಂಪನಿ ನಡೆಸುತಿದ್ದ ಅನ್ಯಾಯ ಬಟಾಬಯಲು ಮಾಡಿದರು. ಈ ಸರಣಿ ವರದಿಯಿಂದ ರೈತರಿಗೆ ನ್ಯಾಯಕೊಡಿಸಿದರು. ಬಿಜೆಪಿ ಸರ್ಕಾರವಿದ್ದಾಗ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಚಿವರ, ಅಧಿಕಾರಿಗಳ ಸಂಪರ್ಕ ಪಡೆದು ಮಾಹಿತಿ ಸಂಗ್ರಹಿಸುವ ಮೂಲಕ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಅಕ್ರಮ ನೇಮಕಾತಿ ವಿಷಯ ಬಯಲಿಗೆಳೆಯುವ ಮೂಲಕ ಸರ್ಕಾರದ ಗಮನ ಸೆಳೆಯುವಂತಹ ವರದಿ ಮಾಡಿ ಇಲಾಖೆ ನೌಕರರಿಗೆ ಬೆಳಕು ಚೆಲ್ಲಿದರು.

ಕೃಷಿ ಪ್ರಿಯ ಆನ್ಲೈನ್ ಪತ್ರಿಕೆಯ ವಿಭಿನ್ನ ಸುದ್ದಿ ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದಗಲಕ್ಕೂ ಪರಿಚಯವಾಗಿತ್ತು. ಇನ್ನೂ ಉನ್ನತ ಮಟ್ಟದಲ್ಲಿ ಪತ್ರಿಕೆ ಹೆಸರು ಮಾಡುವ ಸಂದರ್ಭದಲ್ಲಿ ವಿಧಿಯಾಟ ಕ್ರಿಯಾಶೀಲ ಬರಹಗಾರ ಶರಣಪ್ಪ ಕುಂಬಾರ ಅವರನ್ನು ಇನ್ನಿಲ್ಲದಂತೆ ಮಾಡಿತು..

ಓದುಗ ದೊರೆಗಳೇ, ಕೃಷಿ ಪ್ರಿಯ ಪತ್ರಿಕೆ ಹಾಗೂ ಸಂಪಾದಕರಾದ ಶ್ರೀಶರಣಪ್ಪ ಕುಂಬಾರ ಗುರುಗಳ ನಿಧನ ವರದಿ ತಮಗೆ ನೀಡಲು ನನಗೆ ಅತೀವ ದುಃಖವಾಗುತ್ತಿದೆ..!