ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : 77ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮ ಪ್ರಯುಕ್ತ ಜಿಲ್ಲೆಯ ಕುಷ್ಟಗಿ ಪಟ್ಟಣದ ತಾಲೂಕಾಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರುಹಾಜರಿ ಕಂಡು ನೂತನ ತಹಸೀಲ್ದಾರ್ ಶೃತಿ ಮಲ್ಲಪ್ಪಗೌಡರ್ ಅವರು ಗರಂ ಆದ ಪ್ರಸಂಗ ಜರುಗಿತು.!
ಇಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಕೇವಲ ಬೆರಳೆಣಿಕೆ ಅಧಿಕಾರಿಗಳು ಹಾಗೂ ಕೆಲ ಇಲಾಖೆ ಪ್ರತಿನಿಧಿಗಳು ಪಾಲ್ಗೊಂಡಿದ್ದನ್ನು ಗಮನಿಸಿದ ತಹಸೀಲ್ದಾರ್, ಈ ಹಿಂದೆ ನಡೆದ ಪೂರ್ವಭಾವಿ ಸಭೆಗಳು ಹೀಗೆ ನಡೆದುಕೊಂಡು ಬಂದಿವೆಯೇ? ಎಂದು ಹಾಜರಿದ್ದ ಇಲಾಖೆ ಸಿಬ್ಬಂದಿಗೆ ಪ್ರಶ್ನಿಸಿದರು. ಪ್ರತಿ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಕಡ್ಡಾಯವಾಗಿ ಪ್ರತಿ ಸಭೆಗೂ ಹಾಜರಿರಲು ಆದೇಶ ಹೊರಡಿಸುವಂತೆ ಸೂಚಿಸಿದರು.
ಬಳಿಕ ಪಾಲ್ಗೊಂಡಿದ್ದ ಅಧಿಕಾರಿಗಳ ಜೊತೆಗೆ ದಿನಾಚರಣೆ ಕುರಿತು ಚರ್ಚೆ ನಡೆಸಿದರು. ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಧ್ವಜಾರೋಹಣ ವೇದಿಕೆ ಸಿದ್ಧತೆ, ತೆರೆದ ವಾಹನ ವ್ಯವಸ್ಥೆ, ಹೂಗಳ ಅಲಂಕಾರ, ಪೆಂಡಾಲ್, ಆಸನಗಳ ವ್ಯವಸ್ಥೆ, ಉಪಹಾರದ ವ್ಯವಸ್ಥೆ, ಕ್ರೀಡಾಂಗಣ ಹಾಗೂ ನಗರ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿವಿಧ ಇಲಾಖೆಗಳಿಗೆ ಜವಾಬ್ದಾರಿ ವಹಿಸಿದರು.
ಸ್ವಾತಂತ್ರ್ಯಯೋಧರ ಮನೆಗೆ ಭೇಟಿ ನೀಡಿ ಗೌರವಿಸುವುದು, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಹೆಚ್ಚು ಅಂಕ ಪಡೆದ ಹಾಗೂ ಕ್ರೀಡೆಗಳಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ಪುಸ್ತಕಗಳನ್ನು
ಗೌರವ ಪುರಸ್ಕಾರವಾಗಿ ಜೊತೆಗೆ ವಿತರಿಸಲು ತೀರ್ಮಾನಿಸಲಾಯಿತು.
ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿಕೊಂಡು ಬೆಳಿಗ್ಗೆ 9:15ರ ಸುಮಾರಿಗೆ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದ ತಹಸೀಲ್ದಾರ್ ಶೃತಿ ಅವರು, ಧ್ವಜಾರೋಹಣ ಬಳಿಕ ನಂತರದಲ್ಲಿ ಪೊಲೀಸ್, ಹೋಂಮ್ ಗಾರ್ಡ, ಸೇವಾ ದಳ, ಎನ್ . ಸಿ . ಸಿ ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿಂದ ಪರೇಡ್ ನಡೆಸಬೇಕು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು. ಇದಕ್ಕೆಲ್ಲ ಶಿಕ್ಷಣ ಇಲಾಖೆಯವರು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸುವಂತಿಲ್ಲ ಎಂದರು.
ಸಭೆಯಲ್ಲಿ ತಾಪಂ ಇಒ ಶಿವಪ್ಪ ಸುಬೇದಾರ, ಮುಖ್ಯಾಧಿಕಾರಿ ಧರಣೇಂದ್ರಕುಮಾರ, ತೋಟಗಾರಿಕೆ ಇಲಾಖೆಯ ಕೆ.ಎಸ್.ಪಾಟೀಲ್, ಡಾ.ಆನಂದ, ಕ್ರೈಂ ಪಿಎಸ್ ಐ ಮಾನಪ್ಪ ವಾಲ್ಮೀಕಿ, ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಸೇರಿದಂತೆ ವಿವಿಧ ಇಲಾಕಮಯ ಅಧಿಕಾರಿಗಳು ಮತ್ತು ಕಂದಾರ ಇಲಾಖೆಯ ಸಿಬ್ಬಂದಿ ಇದ್ದರು.!!
ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ. ಯಾವುದೇ ಕಾರಣಕ್ಕೂ ವ್ಯಾಪಾರಿಗಳು ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡಬಾರದು. ಹಾಗೊಂದು ವೇಳೆ ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸುವುದಲ್ಲದೇ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜ ಬಳಕೆ ಮಾಡಬಾರದು ಎಂದು ಪುರಸಭೆಯ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ಸೂಚಿಸಲಾಗುವದು.
– ಶೃತಿ ಮಲ್ಲಪ್ಪಗೌಡರ್, ತಹಸೀಲ್ದಾರ್, ಕುಷ್ಟಗಿ.