ಮುನೇತ್ರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಭಾನುವಾರ ಬೆಳಿಗ್ಗೆ ಇಲ್ಲಿನ ತಾಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ ಯುವಕರೊಂದಿಗೆ ಕ್ರಿಕೆಟ್ ಆಟವಾಡಿ ಗಮನಸೆಳೆದರು.
ಬೆಳಿಗ್ಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು, ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ವೀಕ್ಷಣೆ ಮಾಡಿದರು. ಅವರನ್ನು ಕ್ರೀಡಾಂಗಣಕ್ಕೆ ಕರೆತಂದಿದ್ದ ಸ್ಥಳೀಯರಾದ ಜಿಲ್ಲಾ ಪಂಚಾಯಿತಿ ಮುಖ್ಯಲೆಕ್ಕಾಧಿಕಾರಿ ಅಮೀನ್ ಅತ್ತಾರ ಅವರು ಆಟಗಾರರನ್ನು ಪರಿಚಯಿಸಿದರು.
ಬಳಿಕ ಸೌಹಾರ್ದಯುತವಾಗಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ಜಗದೀಶ ನವಲಹಳ್ಳಿ ನೇತೃತ್ವದ ಕುಷ್ಟಗಿ ಮಾರ್ನಿಂಗ್ ಪ್ರಾಕ್ಟಿಸ್ ಪ್ಲೆಯರ್ ತಂಡದ ಹಾಗೂ ಅಮೀನ್ ಅತ್ತಾರ ಅವರ ನೇತೃತ್ವದ ಜಿಲ್ಲಾ ಪಂಚಾಯಿತಿ ತಂಡದ ನಡುವಿನ ಸೆಣೆಸಾಟದಲ್ಲಿ ಜಿ.ಪಂ. ಸಿಇಒ ರಾಹುಲ್ ರತ್ನಂ ಪಾಂಡೆಯ ಹಾಗೂ ಮುಖ್ಯಲೆಕ್ಕಾಧಿಕಾರಿ ಅಮೀನ್ ಅತ್ತಾರ ಅವರು ಉಪಯುಕ್ತ ಆಟವಾಡಿ ಗಮನಸೆಳೆದರು.
ಮೂಲಸೌಕರ್ಯ ನೀಗಿಸಿ: ಇದೇವೇಳೆ ಕ್ರೀಡಾಂಗಣದ ಸುಣ್ಣ ಬಣ್ಣ ಸೇರಿದಂತೆ ರನ್ನಿಂಗ್ ಟ್ರ್ಯಾಕ್, ಕುಡಿಯುವ ನೀರು, ಶೌಚಾಲಯ ಇತರೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವಂತೆ ಮೌಖಿಕವಾಗಿ ಕ್ರೀಡಾಪಟುಗಳು ಮನವಿ ಮಾಡಿದರು. ತಮ್ಮ ಕಚೇರಿಗೆ ಭೇಟಿಕೊಟ್ಟು ಲಿಖಿತವಾಗಿ ಮನವಿ ಕೊಟ್ಟರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೂಲಕ ಮೂಲಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು.
ಬಳಿಕ ಕ್ರೀಡಾಕೂಟಕ್ಕೆ ಸ್ಪೂರ್ತಿ ನೀಡಲು ಹಾಗೂ ಕ್ರೀಡಾಂಗಣ ಭೇಟಿ ಸವಿ ನೆನಪಿಗಾಗಿ ಕ್ರೀಡಾಪಟುಗಳೊಂದಿಗೆ ಸಸಿ ನೆಟ್ಟು ನೀರುಣಿಸಿದರು. ಈ ವೇಳೆ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕ್ರೀಡಾಪಟುಗಳಾದ ಮಹಾಂತೇಶ ಜಾಲಿಗಿಡದ, ವೀರಗಂಗಾಧರಸ್ವಾಮಿ ಹಿರೇಮಠ, ಮಹ್ಮದ್ ಶಫಿ, ರಮೇಶ ಮೇಲಿನಮನಿ, ಕೃಷ್ಣಮೂರ್ತಿ ಟೆಂಗುಂಟಿ, ಮಹಮ್ಮದ್ ಗೇಸು, ನೀಲಕಂಠಬಾಬು ಇನ್ನಿತರರು ಇದ್ದರು.!!