ಕೆರೆಗೆ ಸೇರಬೇಕಾದ ಕೃಷ್ಣೆ ಬೀದಿಗೆ.!

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ಕೆರೆ ಅಂಗಳಕ್ಕೆ ಸೇರಬೇಕಾದ ಕೃಷ್ಣಾ ನದಿ ನೀರು ಬೀದಿ ಪಾಲಾಗಿ ಅಪಾರ ಪ್ರಮಾಣದಲ್ಲಿ ಪೋಲಾಗುತ್ತಿರುವುದು ಬೆಳಕಿಗೆ ಬಂದಿದೆ.

 

ಕೆರೆ ತುಂಬಿಸೋ ಯೋಜನೆಯಡಿ ಗ್ರಾಮದ ಕೆರೆಗೆ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಕೆರೆಯ ದಡದಲ್ಲಿ ಅಳವಡಿಸಿರುವ ಮುಖ್ಯ ಕೊಳಾಯಿಯಲ್ಲಿ ಸೋರಿಕೆ ಕಂಡು ಭಾನುವಾರ ತಡರಾತ್ರಿಯಿಂದ ಕಾರಂಜಿ ರೂಪದಲ್ಲಿ ಅಪಾರ ಪ್ರಮಾಣದ ನೀರು ಗ್ರಾಮದ ಬೀದಿಗೆ ಹರಿದು ಪೋಲಾಗುತ್ತಿದೆ. ರಸ್ತೆ ಉದ್ದಕ್ಕೂ ಹರಿಯುತ್ತಿರುವ ನೀರು ಗ್ರಾಮದ ಓಣಿಗಳಿಗೆ ನುಗ್ಗಿದೆ. ನೀರಿನ ರಭಸಕ್ಕೆ ರಸ್ತೆ ಕಿತ್ತು ಹಾಳಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕೊಳಾಯಿಯ ನೀರು ಸೋರಿಕೆಗೆ ದುರಸ್ತಿ ಕ್ರಮಕೈಗೊಳ್ಳಬೇಕು. ಪೋಲಾಗುತ್ತಿರುವ ನೀರನ್ನು ತಡೆದು ಗ್ರಾಮದ ಕೆರೆಯನ್ನು ತುಂಬಿಸಬೇಕು. ಅದೇರೀತಿ ಗ್ರಾಮದ ಹಾಳಾದ ರಸ್ತೆಯನ್ನೂ ದುರಸ್ತಿಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.