ಗೃಹಲಕ್ಷ್ಮೀ ಯೋಜನೆ ಆಹ್ವಾನ ಪತ್ರಿಕೆಯ 11 ಸಾಲಿನಲ್ಲಿ 12 ತಪ್ಪು : ತಾವರಗೇರಾ ಪ.ಪಂ. ಯಡವಟ್ಟು

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಸ್ತ್ರೀ ಆರ್ಥಿಕ ಸಬಲೀಕರಣದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯಿತಿ ಮುದ್ರಿಸಿದ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡ ಪದಗಳ ಕಾಗುಣಿತ ತಪ್ಪುಗಳ ಯಡವಟ್ಟು ಓದುಗರನ್ನು ಪೇಚಿಗೆ ಸಿಲುಕಿದ ಪ್ರಸಂಗ ಜರುಗಿದೆ.!

ಇದೇ ಆಗಸ್ಟ್ 30 ರಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮ ಆಯೋಜಿಸಿದೆ. ಆ ನಿಮಿತ್ತವಾಗಿ ಸಾರ್ವಜನಿಕರು, ಫಲಾನುಭವಿಗಳು, ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಆಮಂತ್ರಣ ಪತ್ರಿಕೆ ಮುದ್ರಿಸಿದೆ. ಆದರೆ, ಆಮಂತ್ರಣ ಪತ್ರಿಕೆಯ ಹತ್ತು ಕನ್ನಡ ವಾಕ್ಯ ಸಾಲುಗಳಲ್ಲಿ ಹನ್ನೊಂದು ಶಬ್ದಗಳು ಕಾಗುಣಿತ ತಪ್ಪಾಗಿ ಓದಲು ಅಪಭ್ರಂಶವಾಗಿವೆ.

ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕೊಟ್ಟಾಗ ಸರಿಯಾಗಿ ಪರಿಶೀಲಿಸಬೇಕಿತ್ತು. ನಿರ್ಲಕ್ಷ್ಯಿಸಿ ತಪ್ಪುಗಳಿಂದ ಕೂಡಿದ ಆಮಂತ್ರಣವನ್ನೇ ಸಾರ್ವಜನಿಕರಿಗೆ ಹಂಚಲಾಗಿದೆ. ಇದನ್ನು ಗಮನಿಸಿದ ಸಾಹಿತಿಗಳು ಹಾಗೂ ಪ್ರಜ್ಞಾವಂತರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ಇಲಾಖೆಗೆ ಛೀಮಾರಿ ಹಾಕಿದ್ದಾರೆ. ವಿಷಯ ತಿಳಿದು ಪೇಚಿಗೆ ಸಿಲುಕಿದ ಪ.ಪಂ. ಅಧಿಕಾರಿಗಳು ತಪ್ಪಾದ ಶಬ್ಧಗಳನ್ನು ಸರಿಪಡಿಸಿ ಮರು ಮುದ್ರಿಸಿದೆ.

ಮಿಸ್ಟೇಕ್’ನಿಂದಾಗಿ ಈ ರೀತಿ ತಪ್ಪಾಗಿದೆ. ಸಮಯದ ಅಭಾವದಿಂದ ಪತ್ರಿಕೆ ಪರಿಶೀಲನೆ ಮಾಡಲು ಆಗಲಿಲ್ಲ. ತರಾತುರಿಯಲ್ಲಿ ಸಿಬ್ಬಂದಿ ಕೆಲವರಿಗಷ್ಟೇ ಹಂಚಿದ್ದಾರೆ. ತಪ್ಪನ್ನು ಸರಿಪಡಿಸಿಕೊಂಡು ನಿನ್ನೆ ಸಂಜೆಯೇ ಪತ್ರಿಕೆಯನ್ನು ಮರು ಮುದ್ರಿಸಲಾಗಿದೆ.

– ನಬಿಸಾಬ ಖುದಾನ್ನವರ,   ಮುಖ್ಯಾಧಿಕಾರಿ  ಪಟ್ಟಣ ಪಂಚಾಯಿತಿ ತಾವರಗೇರಾ.

ಇನ್ನುಮುಂದಾದರೂ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಮುದ್ರಿಸುವ ಮೊದಲು ಇಲಾಖೆ ಅಧಿಕಾರಿಗಳು, ಪರಿಣಿತಿ ಹೊಂದಿರುವ ನುರಿತ ಕನ್ನಡ ಪಂಡಿತರಲ್ಲಿ ವಿಷಯ ಬರೆಯಿಸಿಕೊಂಡು ಪ್ರಕಟಣೆ ಅಥವಾ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡಿಸಬೇಕು 

– ಶೇಖರಗೌಡ ಸರನಾಡಗೌಡರ,             ಹಿರಿಯ ಸಾಹಿತಿ, ತಾವರಗೇರಾ.