ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನೂತನ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಮೊದಲ ಬಾರಿಗೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಳೆಯಾಶ್ರಿತ ಪ್ರದೇಶಗಳಾದ ಡೊಣ್ಣೆಗುಡ್ಡ, ಹನುಮಸಾಗರ, ಯರಗೇರಾ ಗ್ರಾಮಗಳ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಿದರು.
ಇಂದು ದಿನಾಂಕ 29-08-2023 ಮಂಗಳವಾರ ದಿನ ಜಿಲ್ಲೆಯ ಕುಕನೂರು, ಯಲಬುರ್ಗಾ ತಾಲೂಕು ಭೇಟಿ ಬಳಿಕ ತಾಲೂಕಿನ ಯರಗೇರಾ ಗ್ರಾಮದ ವ್ಯಾಪ್ತಿಯ ರೈತ ರಾಮಣ್ಣ ಎಂಬುವರ ಕೃಷಿ ಜಮೀನಿಗೆ ಖುದ್ದು ಭೇಟಿ ನೀಡಿ ಶೇಂಗಾ ಬೆಳೆಯ ವಾಸ್ತವ ಪರಿಶೀಲನೆ ನಡೆಸಿದರು.
ಬಳಿಕ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಪ್ರಕಾರ ತಾಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ಅಂದಾಜು ಶೇ.50ರಷ್ಟು ಅತಿವೃಷ್ಟಿಯಿಂದ ಅನಾವೃಷ್ಟಿಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಕುರಿತು ಮಾಹಿತಿ ತಿಳಿದ ಜಿಲ್ಲಾಧಿಕಾರಿ ನಲಿನ ಅತುಲ್ ಅವರು, ಸ್ಥಳದಲ್ಲೇ ಇದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೆಸ್ವಾಮಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ ಅವರಿಗೆ ಶೀಘ್ರದಲ್ಲೇ ತಮ್ಮ ಇಲಾಖೆಯಿಂದ ತಾಲೂಕಿನ ಬೆಳೆ ಹಾನಿ ಕುರಿತು ವಿವರ ವರದಿಯನ್ನು ಸಿದ್ಧಪಡಿಸಿ ತಮಗೆ ಸಲ್ಲಿಸುವಂತೆ ಸೂಚಿಸಿದರು.
ತಾಲೂಕಿನ ಡೊಣ್ಣೆಗುಡ್ಡ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ವಿತರಿಸುವ ಆಹಾರ ವಿವರ ಹಾಗೂ ಇಂದು ಸಿದ್ಧಪಡಿಸಿದ ಆಹಾರ ಕುರಿತು ಕೇಂದ್ರದ ಸಹಾಯಕಿ ಬಳಿ ವಿಚಾರಣೆ ನಡೆಸಿದರು.
ಹನುಮಸಾಗರ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಸಿಬ್ಬಂದಿಯಿಂದ ಪಂಚಾಯಿತಿ ಕಾರ್ಯವೈಖರಿಗಳ ಕುರಿತು ಮಾಹಿತಿ ಪಡೆದರು.
ಈ ವೇಳೆ ತಹಶೀಲ್ದಾರ ಶೃತಿ ಮಳ್ಳಪ್ಪಗೌಡರ್, ಕೃಷಿ ಇಲಾಖೆ ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಹಾಗೂ ಕಂದಾಯ ನಿರೀಕ್ಷಕರಾದ ಶರಣಯ್ಯ, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.