ಶಿಕ್ಷಕ ವೃತ್ತಿ ಘನತೆ ಕಾಪಾಡಬೇಕು: ಶಾಸಕ ದೊಡ್ಡನಗೌಡ ಪಾಟೀಲ್

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಸಮಾಜದಲ್ಲಿ ಜ್ಞಾನ ನೀಡುವ ಶಿಕ್ಷಕನಿಗೆ ಅಪಾರ ಗೌರವವಿದೆ. ವೃತ್ತಿಯ ಘನತೆ ಕಾಪಾಡುವ ಪ್ರಾಮಾಣಿಕ ಕೆಲಸವನ್ನು ಇಂದಿನ ಶಿಕ್ಷಕರು ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಹೇಳಿದರು.

ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣದ ಕ್ರೈಸ್ತ ದ ಕಿಂಗ್ ಪ್ರೌಢ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ರವರ 135ನೇ ಜನ್ಮ ದಿನಾಚರಣೆಯ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ಯುವಜನತೆ ಹಾದಿ ತಪ್ಪುತ್ತಿದ್ದು, ದೇಶದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗಲು ಕಾರಣವಾಗಿದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ತಮ್ಮ ವೃತ್ತಿಯನ್ನು ಇನ್ನಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಮಾನವ ಕಂಪ್ಯೂಟರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಥಣಿಯ ಬಸವರಾಜ ಶಂಕರ್ ಉಮ್ರಾಣಿ ಅವರು ವಿಶೇಷ ಉಪನ್ಯಾಸ ನೀಡಿ, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಕರು ಬೋಧನೆ ಮಾಡಿ ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳನ್ನು ಮೊಬೈಲ್ ಹಾಗೂ ಟಿವಿಗಳಿಂದ ದೂರವಿಟ್ಟು, ಉತ್ತಮ ಪುಸ್ತಕಗಳನ್ನು ನೀಡಿ ಓದುವ ಹವ್ಯಾಸವನ್ನು ಶಿಕ್ಷಕರು ಹಾಗೂ ಪಾಲಕರು ರೂಢಿಸಬೇಕು ಎಂದು ಸಲಹೆ ನೀಡಿದರು.

ಬಳಿಕ ತಮ್ಮ ಬೌದ್ಧಿಕ ಶಕ್ತಿ ಮೂಲಕ ಗಣಿತ ವಿಸ್ಮಯವನ್ನು ಪರಿಚಯಿಸಿ ವೇದಿಕೆ ಮೇಲಿನ ಅತಿಥಿಗಳು ಹಾಗೂ ಸಭಿಕರನ್ನು ಹುಬ್ಬೇರಿಸುವಂತೆ ಮಾಡಿದರು. ಅಲ್ಲದೆ ಅನಿರೀಕ್ಷಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಪದ ಆಶು ಕವಿ ಸಿದ್ದಪ್ಪ ಬಿದರಿ ಅವರು, ತಮ್ಮ ಪ್ರಚಲಿತ ಕವಿತೆಗಳಿಂದ ರಂಜಿಸಿದರು.

ಇದೇವೇಳೆ ಕಂಪ್ಯೂಟರ್ ಸೌಲಭ್ಯ ಹೊಂದಿರದ ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ ನೆರೆಬೆಂಚಿ ಹಾಗೂ ಚಳಗೇರಿ ಶಾಲೆಗಳಿಗೆ ಶಾ‌ಸಕ ದೊಡ್ಡನಗೌಡ ಪಾಟೀಲ್ ಅವರು ಸಾಂಕೇತಿಕವಾಗಿ ಲ್ಯಾಪ್ಟಾಪ್ ಹಾಗೂ ಪ್ರಿಂಟರ್ ವಿತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇವೇಳೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಪ್ರಮುಖ ಬೇಡಿಕೆಗಳ ಮನವಿಯನ್ನು ಶಾಸಕ ದೊಡ್ಡನಗೌಡ ಪಾಟೀಲ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಶರಣಪ್ಪ, ಪುರಸಭೆ ಸದಸ್ಯೆ ಇಮಾಂಬಿ ಕಲಬುರಗಿ, ಕ್ರೈಸ್ತ ದ ಕಿಂಗ್ ಶಾಲೆಯ ಮುಖ್ಯೋಪಾಧ್ಯಾಯಿನಿ ಕನ್ನಿಕಾ ಮೇರಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಾಲಾಜಿ ಬಳಿಗಾರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಲ್ಲಪ್ಪ ಕುದರಿ, ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನೀಲನಗೌಡ ಹೊಸಗೌಡ್ರು, ಶಿಕ್ಷಣ ಸಂಯೋಜಕ ದಾವಲಸಾಬ ವಾಲೀಕಾರ, ಅಹ್ಮದ್ ಹುಸೇನ್, ಮಹದೇವಪ್ಪ ಎಂ.ಗೊಣ್ಣಾಗರ, ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಶಾರದಾ ಅಣ್ಣಿಗೇರಿ, ನಾಗಪ್ಪ ಬಿಳಿಯಪ್ಪನವರ, ಯಮನಪ್ಪ ಚೂರಿ ಸೇರಿದಂತೆ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ನೂರಾರು ಶಿಕ್ಷಕರು ಭಾಗವಹಿಸಿದ್ದರು. ನಿಲೋಗಲ್ ಶಿಕ್ಷಕ ಬಸವರಾಜ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಶಿಕ್ಷಣ ಅಧಿಕಾರಿಗಳಾದ ಶರಣಪ್ಪ ತೆಮ್ಮಿನಾಳ ಸ್ವಾಗತಿಸಿದರು, ಡಾ.ಜೀವನಸಾಬ ಬಿನ್ನಾಳ ನಿರೂಪಿಸಿದರು.