ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಡಿ ದರ್ಜೆ ಮಹಿಳಾ ನೌಕರರನ್ನು ಜಿಲ್ಲೆಯ ಕುಷ್ಟಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ತಮ್ಮ ಮನೆ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಡಿ.ಎಸ್.ಎಸ್. ಪ್ರಮುಖ ಹುಸೇನಪ್ಪ ಮುದೇನೂರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ದಿನಾಂಕ 03-10-2023 ರಂದು ಮಂಗಳವಾರ ಮಾಧ್ಯಮದವರ ಮುಂದೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ತಮ್ಮ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ನಾವ್ವರು ಮಹಿಳಾ ಡಿ ದರ್ಜೆ ನೌಕರರನ್ನು ಪ್ರತಿನಿತ್ಯ ತಮ್ಮ ಮನೆಗೆ ಕರೆಯಿಸಿಕೊಂಡು ಊಟ-ಉಪಹಾರ ತಯಾರಿಸಲು, ಕಸ-ಮುಸುರೆ, ಬಟ್ಟೆ ತೊಳೆಯಲು ಬಳಸಿಕೊಳ್ಳುತ್ತಿದ್ದಾರೆ ಎಂದು ಮಹಿಳಾ ನೌಕರರು ಕಾರ್ಯ ನಿಮಿತ್ತ ತಹಸೀಲ್ದಾರ್ ಕಚೇರಿಗೆ ಬಂದಾಗ ತಮ್ಮ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಗುಲಾಮ ಪದ್ಧತಿ, ಜೀತಪದ್ಧತಿ ಇನ್ನೂ ಜೀವಂತ ಇದೇ ಎಂಬುದಕ್ಕೆ ಇದೇ ಸಾಕ್ಷಿಯಾಗಿದ್ದು, ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಸರ್ಕಾರಿ ಸೇವೆಯ ಅವಧಿಯಲ್ಲಿ ಮಹಿಳಾ ನೌಕರರನ್ನು ಮನೆಕೆಲಸಕ್ಕೆ ಉಪಯೋಗಿಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರದ ಸುತ್ತೋಲೆ ಕರ್ನಾಟಕ ಸಿವಿಲ್ ಸೇವೆಗಳ (ಸನ್ನಡತೆ) ನಿಯಮ 1966ರ ನಿಯಮ 3(1)(iii) ಮತ್ತು 19ನ್ನು ಉಲ್ಲಂಘನೆಯಾಗಿದೆ. ಮೇಲಧಿಕಾರಿಗಳು ತಹಸೀಲ್ದಾರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಡಿ ದರ್ಜೆ ಮಹಿಳಾ ನೌಕರರ ಮೇಲೆ ಕಿರುಕುಳ ನೀಡಿದರೆ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಪ್ರತಿಭಟೆನೆ ಹಮ್ಮಿಕೊಳ್ಳಲಾಗುವದು ಎಂದು ಹೇಳಿದ್ದಾರೆ.
ಈ ವೇಳೆ ದುರುಗೇಶ ದೇವರಮನಿ, ಚಂದಾಲಿಂಗಪ್ಪ ಚಂದಪ್ಪ ಗುಡುಗುಲದಿನ್ನಿ, ಶೇಖರಪ್ಪ ಬನ್ನಟ್ಟಿ ಇತರರು ಇದ್ದರು.