ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಬರೆದಿದ್ದೆಲ್ಲವೂ ಸಾಹಿತ್ಯವೆಂದು ಕವಿತೆ, ಕಥಾ ಸಂಕಲನಗಳನ್ನು ಹೊರತಂದರೆ ಏನು ಪ್ರಯೋಜನವಿಲ್ಲ ಎಂದು ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರು ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ತಿರುಳ್ಗನ್ನಡ ಪ್ರಕಾಶನ ಸಹಯೋಗದಲ್ಲಿ ನಡೆದ ರವೀಂದ್ರ ಬಾಕಳೆ ರಚಿತ “ಕೂಡಿಟ್ಟ ಕನಸು” ಕಥಾ ಸಂಕಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಸಂದೇಶ ನೀಡುವ ಸಾಹಿತ್ಯ ರಚನೆಗೆ ಯುವಕರು ಮುಂದಾಗಬೇಕು ಎಂದ ಶಾಸಕ ದೊಡ್ಡನಗೌಡ, ಎಲೆಮರೆಕಾಯಿಯಂತಿರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕೂಡಿಟ್ಟ ಕನಸು ಗ್ರಂಥದಾನಿ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಅವರು ಕಥಾ ಸಂಕಲನ ಲೋಕಾರ್ಪಣೆಗೊಳಿಸಿದರು.
ಡಾ.ಜೀವನಸಾಬ ಬಿನ್ನಾಳ ಅವರು ಆಶಯ ನುಡಿಗಳನ್ನಾಡಿದರು. ಸಾಹಿತಿ ಶೇಖರಗೌಡ ಸರನಾಡಗೌಡರ ಅವರು, ಕಥಾ ಸಂಕಲನ ವಿಶ್ಲೇಷಣೆ ಮಾಡಿದರು. ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ವಂದನಾ ಗೋಗಿ,, ರವೀಂದ್ರ ಬಾಕಳೆ, ಶ್ರೀನಿವಾಸ ಜಹಗೀರದಾರ, ಡಾ.ರವಿಕುಮಾರ್ ದಾನಿ ಉಪಸ್ಥಿತರಿದ್ದರು
ಇದೇ ವೇಳೆ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು.
ಶ್ರೀಗವಿಸಿದ್ದೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕೂಡಿಟ್ಟ ಕನಸು ಕಥಾ ಸಂಕಲನ ರೂಪಕ ಪ್ರದರ್ಶನಗೊಂಡಿತು.
ಬಳಿಕ ವಿವಿಧ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚನ ಮಾಡಿ ಸಭಿಕರ ಗಮನ ಸೆಳೆದರು.
ಶರಣಪ್ಪ ಲೈನದ ಸ್ವಾಗತಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ಮಹೇಶ ಜಿ.ಹೆಚ್. ನಿರೂಪಿಸಿದರು.