ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ದೇಶದ ಅಗ್ನಿಪಥ್ ಸೇನೆಗೆ ಆಯ್ಕೆಯಾಗಿ ದೇಶ ಸೇವೆಗೆ ಅಣಿಯಾದ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದ ಯುವಕರಿಬ್ಬರನ್ನು ಸೋಮವಾರ ಗ್ರಾಮಸ್ಥರು ಗೌರವಿಸಿದರು.
ಗ್ರಾಮದ ಕುಮಾರ ಪ್ರಶಾಂತ ಶೇಖರಪ್ಪ ಹವಾಲ್ದಾರ್ ಹಾಗೂ ಕುಮಾರ ಮಹೇಶ ಮಲ್ಲನಗೌಡ ಮರೇಗೌಡರ ಅಗ್ನಿಪಥ್ ಸೇನೆಗೆ ಆಯ್ಕೆಯಾದ ಯುವಕರು.
ಈಗಾಗಲೇ ಅಗ್ನಿಪಥ್ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ಹೈದ್ರಾಬಾದನಲ್ಲಿ ಏಳು ತಿಂಗಳು ಕಾಲ ತರಬೇತಿ ಪಡೆದು ಸ್ವಗ್ರಾಮ ತಳವಗೇರಗೆ ಆಗಮಿಸಿದಾಗ ಯುವ ಸೈನಿಕರನ್ನು ಗ್ರಾಮಸ್ಥರು, ಬಂಧುಗಳು ಹಾಗೂ ಸ್ನೇಹಿತರು ಸೇರಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಸ್ವಾಗತಿಸಿ ಶಾಲು ಹೊದಿಸಿ ಹೂಮಾಲೆ ಹಾಕಿ ಗೌರವಿಸಿದರು.
ಈ ವೇಳೆ ಮುಂದಿನ ವಾರದಲ್ಲಿ ಗುಜರಾತ್ ಹಾಗೂ ರಾಂಚಿ ಸೇನಾ ಘಟಕಕ್ಕೆ ನೇಮಕಗೊಂಡು ದೇಶ ರಕ್ಷಣೆಯ ಸೇವೆಗೆ ಅಣಿಯಾಗುತ್ತಿರುವ ವಿಷಯ ತಿಳಿದು ಅಭಿನಂದಿಸಿದರು.