ಮಾಂಗಲ್ಯ ಸರ ಎಗರಿಸಲು ಯತ್ನಿಸಿದ ಕಳ್ಳ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಯಾರೋ ಕಳ್ಳನೋರ್ವ ರಸ್ತೆಯಲ್ಲಿ ಸಂಚರಿಸುತಿದ್ದ ಪಾದಾಚಾರಿ ಮಹಿಳೆಯೊಬ್ಬಳ ಕೊರಳ ಮಾಂಗಲ್ಯ ಸರ ಕದಿಯಲು ಯತ್ನಿಸಿ ವಿಫಲವಾದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ.

ಪಟ್ಟಣದ ವಿಷ್ಣುತೀರ್ಥ ನಗರ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಅವರ ನಿವಾಸದ ಪಕ್ಕದಲ್ಲಿ ಈ ಘಟನೆ ನಡೆದಿದೆ. ಅದೇ ನಗರದ ನಿವಾಸಿಯಾದ ಮಹಿಳೆ ಸ್ವಸಹಾಯ ಗುಂಪಿನಲ್ಲಿ ಕರ್ತವ್ಯನಿರ್ವಹಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಬೈಕಲ್ಲಿ ಬಂದ ಯಾರೋ ಅಪರಿಚಿತ ಕಳ್ಳನೋರ್ವ ಮಹಿಳೆಯನ್ನು ಹಿಂಬಾಲಿಸಿ ಬೆಳಕಿನ ವ್ಯವಸ್ಥೆ ಇಲ್ಲದ ಕತ್ತಲು ಪ್ರದೇಶದಲ್ಲಿ ಕೊರಳ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾನೆ. ಮಹಿಳೆಯು ಗಾಬರಿಯಿಂದ ಚೀರಿಕೊಂಡಾಗ ಜನ ದೌಡಾಯಿಸುವ ವೇಳೆ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿ ಹಿಡಿಯಲು ಯತ್ನಿಸಿದಾಗ ಕತ್ತಲು ಆವರಿಸಿದ್ದರಿಂದ ಕಳ್ಳ ಕೈಗೆ ಸಿಗಲಿಲ್ಲ. ದಪ್ಪನೆಯ ವ್ಯಕ್ತಿ ಕಂದು ಬಣ್ಣದ ಜಾಕೆಟ್ ಧರಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಮಹಿಳೆಯ ಕೊರಳಿಗೆ ತೆರಚಿದ ಗಾಯಗಳಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ಘಟನೆಯ ನಂತರ ಬೆಚ್ಚಿಬಿದ್ದಿರುವ ನಗರದ ನಿವಾಸಿಗಳು ಏರಿಯಾದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೇ ಆತಂಕದಲ್ಲಿ ಕಾಲಕಳೆಯುವಂತಾಗಿದೆ. ಏರಿಯಾದ ಪ್ರತಿ ರಸ್ತೆಗಳಿಗೆ ವಿದ್ಯುತ್ ದೀಪ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಿ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಒತ್ತಾಯಿಸಿದರು.