ಅಸಭ್ಯ ವರ್ತನೆ, ಹಣದ ಕಿರುಕುಳ ದೂರು: ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರ್. ಸಿ.ಹೆಚ್. ಅಧಿಕಾರಿ ಭೇಟಿ, ವಿಚಾರಣೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಬಡ ರೋಗಿಗಳೊಂದಿಗೆ ಅಸಭ್ಯ ವರ್ತನೆ ಹಾಗೂ ಹಣಕ್ಕಾಗಿ ಕಿರುಕುಳ ನೀಡುತ್ತಿರುವ ಕುರಿತು ದಾಖಲಾದ ದೂರು ಆಧರಿಸಿ ಜಿಲ್ಲಾ ಆರ್. ಸಿ.ಹೆಚ್. ಅಧಿಕಾರಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಅಕ್ಟೋಬರ್ 4 ರಂದು ಸಮಾಜ ಸೇವಕ ನೀಲಕಂಠಬಾಬು ನಿಲೋಗಲ್ ಎಂಬುವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಆದೇಶದ ಮೇರೆಗೆ ಜಿಲ್ಲಾ ಆರ್. ಸಿ.ಹೆಚ್. ಅಧಿಕಾರಿ ಪ್ರಕಾಶ ಹಾಗೂ ಮತ್ತೊಬ್ಬ ಅಧಿಕಾರಿ ನಾಡಗೌಡ ಎಂಬುವರು ಆಸ್ಪತ್ರೆಯ ಸ್ಟಾಪ್ ನರ್ಸಗಳನ್ನು ವಿಚಾರಣೆ ನಡೆಸಿ ಅವರಿಂದ ಲಿಖಿತವಾಗಿ ವರದಿ ಪಡೆದರು. ಸ್ಟಾಪ್ ನರ್ಸ್ ಶೈಲಜಾ ಗೋಣಿ ಎಂಬುವರು ಅಸಭ್ಯವಾಗಿ ಪದಬಳಸಿ ಹಣಕ್ಕೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದ ಸೀಜರೀಯನ್ ಆದ ಮಹಿಳೆಯ ಪತಿ ಮಂಜುನಾಥ ಹಡಪದ ಎಂಬುವರನ್ನು ಕರೆಯಿಸಿ ವಿಚಾರಣೆ ನಡೆಸಿ ಘಟನಾ ವಿಷಯ ಕುರಿತು ಲಿಖಿತವಾಗಿ ವರದಿ ಪಡೆದರು. ಬಳಿಕ ಬಾಣಂತಿಯ ಮನೆಗೆ ತೆರಳಿ ವಿಚಾರಣೆ ನಡೆಸುವ ನಿರ್ಧಾರ ತೆಗೆದುಕೊಂಡರು. ಇದೇ ವೇಳೆ ದೂರುದಾರ ಮಂಜುನಾಥ ಅವರು ಕೇವಲ ನಮ್ಮ ವರದಿಯಷ್ಟೇ ಪಡೆಯದೆ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮನೆಗೆ ಹೋಗಿರುವ ಬಾಣಂತಿಯರಿಗೆ ಹಾಗೂ ಅವರ ಕುಟುಂಬಸ್ಥರನ್ನು ಭೇಟಿಯಾಗಿ ವಿಚಾರಣೆ ನಡೆಸಿ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನಡತೆ ಹಾಗೂ ಹಣಕ್ಕಾಗಿ ನೀಡುವ ಕಿರುಕುಳದ ವಾಸ್ತವ ಸತ್ಯ ತಮ್ಮ ಗಮನಕ್ಕೆ ಬರುತ್ತದೆ ಎಂದು ಒತ್ತಾಯಿಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಜಿಲ್ಲಾ ಆರ್. ಸಿ.ಹೆಚ್. ಅಧಿಕಾರಿ ಪ್ರಕಾಶ ಅವರು, ದೂರುದಾರರು ಹಾಗೂ ಆರೋಗ್ಯ ಸಿಬ್ಬಂದಿ ಬಳಿ ನಡೆಸಿದ ವಿಚಾರಣೆಯ ವರದಿಯನ್ನು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗೆ ಸಲ್ಲಿಸಲಾಗುತ್ತದೆ. ಈ ಕುರಿತು ಅವರೇ ಮಾಧ್ಯಮಕ್ಕೆ ವರದಿ ನೀಡುವರು ಎಂದು ತಿಳಿಸಿದರು. ಆಸ್ಪತ್ರೆಯಲ್ಲಿ ನಡೆದ ಈ ವಿಷಯ ಮಾಧ್ಯಮದಲ್ಲಿ ಪ್ರಸಾರ ಆದಾಗಿನಿಂದಲೂ ಸಾರ್ವಜನಿಕರು ಆಸ್ಪತ್ರೆಯ ಅವಸ್ಥೆ ಹಾಗೂ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನಡತೆ ಬಗ್ಗೆ ಮತ್ತಷ್ಟು ಆರೋಪಗಳ ಸುರಿಮಳೆ ಗೈಯ್ಯುತಿದ್ದಾರೆ.

ಒಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೇದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿ ರೋಗಿಗಳಿಂದ ಹಣ ಸುಲಿಗೆ ಅನುಚಿತ ವರ್ತನೆ ಮತ್ತು ದೂರುದಾರರ ಆರೋಪಕ್ಕೆ ವಿಚಾರಣೆ ಹಂತದವರೆಗೆ ಬಂದಿದ್ದು, ಮುಂದೇನಾಗುವುದೋ ಕಾದುನೋಡಬೇಕಿದೆ.