ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸುಲಿಗೆ ಆಸ್ಪತ್ರೆ ಎಂಬ ತಲೆಬರಹದೊಂದಿಗೆ ಒಂದು ಹೆರಿಗೆಗೆ ಇಂತಿಷ್ಟು ಹಣ ಎಂಬ ರೇಟ್ ಬೋರ್ಡಿನ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.
ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ಹನುಮಸಾಗರ ಗ್ರಮದ ಗರ್ಭಿಣಿಗೆ ಸೀಜರೀಯನ್ ಹೆರಿಗೆಯಾಗಿತ್ತು. ಆಕೆಗೆ ಪದೇಪದೆ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಆಕೆಯ ಕುಟುಂಬಸ್ಥರು ಆರೋಗ್ಯ ಸಿಬ್ಬಂದಿ ಬಳಿ ಬಂದು ಔಷದೋಪಚಾರಕ್ಕೆ ಮುಂದಾಗುವಂತೆ ಬೇಡಿಕೊಂಡಿದ್ದರು. ಆದರೆ, ಔಷದೋಪಚಾರಕ್ಕೆ ಮುಂದಾಗದೆ ಅವಾಚ್ಯ ಶಬ್ದಗಳಿಂದ ಅಸಭ್ಯವಾಗಿ ವರ್ತಿಸಿದ್ದರು ಎಂದು ಹೆರಿಗೆಯಾದ ಮಹಿಳೆಯ ಪತಿ ಹಾಗೂ ಸಮಾಜ ಸೇವಕರೊಬ್ಫರು ಜಿಲ್ಲಾ ಪಂಚಾಯಿತಿ ಸಿಇಓಗೆ ದೂರು ನೀಡಿ ಮಾಧ್ಯಮ ಮುಂದೆ ಸೀಜರೀಯನ್ ಹೇರಿಗೆಯಾದರೆ ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೂ ಇಂತಿಷ್ಟು ಹಣ ಭರಿಸಬೇಕು ಎಂದು ಆರೋಪಿಸಿದ್ದರು. ವರದಿಯೂ ಪ್ರಕಟವಾಗಿತ್ತು. ಆದರೆ, ಹಣ ಸುಲಿಗೆ ಮುಂದುವರೆದಿರುವದರಿಂದ ಆಸ್ಪತ್ರೆಯ ಅವಸ್ಥೆಗೆ ರೋಸಿಹೋಗಿರುವ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ‘ಸಾರ್ವಜನಿಕ “ಸುಲಿಗೆ” ಆಸ್ಪತ್ರೆ ಕುಷ್ಟಗಿ’ ಎಂಬ ತಲೆಬರಹದಡಿ ಒಂದು ಹೆರಿಗೆಗೆ ಇಂತಿಷ್ಟು ರೇಟ್ ಬೋರ್ಡ್ ತಯಾರಿಸಿದ ಪೋಸ್ಟ್ ವೈರಲ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ತಜ್ಞವೈದ್ಯ ಡಾ.ಕೆ.ಎಸ್. ರೆಡ್ಡಿ, ತಾವೊಬ್ಬ ಸರ್ಜನ್ ಆದಕಾರಣ ಆಪರೇಷನ್ ಕೇಸ್’ಗಳ ಕಡೆಗೆ ಹಾಗೂ ಓಪಿಡಿ ಕಡೆಗೆ ಹಾಗೂ ಒಳರೋಗಿಗಳ ತಪಾಸಣೆ ಕಡೆಗೆ ಗಮನ ಹರಿಸಬೇಕು. ಈ ಮಧ್ಯೆ ಆಡಳಿತಾಧಿಕಾರಿ ಹುದ್ದೆ ನಿಬಾಯಿಸುವುದು ಕಷ್ಟಸಾಧ್ಯ. ಸದ್ಯ ಸಿಬ್ಬಂದಿ ಮೇಲೆ ಬರುತ್ತಿರುವ ಆರೋಪಗಳಿಂದ ನನಗೆ ಬೇಸರ ತಂದಿದೆ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 135 ಸಿಬ್ಬಂದಿ ಮೇಲೆ ಹಿಡಿತ ಸಾಧಿಸುವುದು ಕಷ್ಟಸಾಧ್ಯ. ಹಾಗಾಗಿ ಆಡಳಿತಾಧಿಕಾರಿ ಹೆಚ್ಚಿನ ಜವಾಬ್ದಾರಿಯನ್ನು ತಮ್ಮಿಂದ ಹಿಂಪಡೆದು ಬೇರೆಯವರಿಗೆ ನೀಡಬೇಕು ಎಂದು ಮೇಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ಆಡಳಿತ ಅವಧಿಯಲ್ಲಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿತ್ತು. ರೋಗಿಗಳು ಬಯ್ಯಾಪೂರ ಅವರಿಗೆ ಮಧ್ಯರಾತ್ರಿ ಕರೆ ಮಾಡಿದರೂ ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ಎಚ್ಚರಗೊಳಿಸಿ ಚಿಕಿತ್ಸೆ ಕೊಡಿಸೋ ಕೆಲಸ ಮಾಡಿದ್ದರು. ಅಲ್ಲದೆ ವೈದ್ಯರು ಅಥವಾ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯದಂತೆ ನೋಡಿಕೊಂಡಿದ್ದರು. ಸಧ್ಯ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಹದಿಗೆಟ್ಟಿದ್ದು, ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಯಾರ ಮಾತು ಕೇಳದಂತಾಗಿದೆ. ಹೀಗೆ ಆಸ್ಪತ್ರೆಯಲ್ಲಿ ಹಣ ವಸೂಲಿ ದಂಧೆ ಮುಂದುವರಿದರೆ ಅನಿವಾರ್ಯವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ ಮುಂದೆ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು.
– ರಾಜು ವಾಲೇಕಾರ
ಆರೋಗ್ಯ ರಕ್ಷಾ ಸಮಿತಿ ಸದಸ್ಯ, ಸಾರ್ವಜನಿಕ ಆಸ್ಪತ್ರೆ ಕುಷ್ಟಗಿ.
Dr. ಕೆ ಎಸ್ ರೆಡ್ಡಿ ಯವರು ತಮ್ಮ ಬಹುತೇಕ ಸಮಯವನ್ನು ತಮ್ಮ ಖಾಸಗಿ ಹಾಸ್ಪಿಟಲ್ ನಲ್ಲಿ ಇರುತ್ತಾರೆ. ಈ ತರ ಹಿರಿಯ ಅಧಿಕಾರಿಗಳೇ ನಿಯತ್ತಾಗಿ ಇಲ್ಲದ ಮೇಲೆ ಕೆಳಹಂತದ ಸಿಬ್ಬಂದಿಗಳು ಹೇಗೆ ನಿಯತ್ತಾಗಿರಲು ಸಾಧ್ಯ? ಬಡ್ಡಿ ಹೇಗೆಯೋ ಕೊಲ್ಲಿಗಳು ಕೂಡ ಹಾಗೆಯೇ.