ಕೃಷಿಪ್ರಿಯ ನ್ಯೂಸ್ |
ಬೆಂಗಳೂರು: ಬುಧವಾರ ರಾಜ್ಯ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ 2021ನೇ ಸಾಲಿನ ಪುಸ್ತಕ ಆಯ್ಕೆ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷ ಡಾ.ಕರಿಗೌಡರ ಬೀಚನಹಳ್ಳಿ ಅವರನ್ನು ನೂತನ ಸದಸ್ಯರ ಪರವಾಗಿ ಹನುಮಸಾಗರದ ಸಾಹಿತಿ ಹಾಗೂ ರಾಜ್ಯ ಸಮಿತಿಯ ನೂತನ ಸದಸ್ಯ ಕಿಶನರಾವ್ ಕುಲಕರ್ಣಿ ಸನ್ಮಾನಿಸಿದರು.
ಬಳಿಕ ಮನವಿ ಮಾಡಿದ ಅವರು, ಪ್ರಕಾಶಕರು, ಲೇಖಕರು ಆರ್ಥಿಕ ತೊಂದರೆ ಎದುರಿಸುತ್ತಿದ್ದು ಪುಸ್ತಕ ಪ್ರಕಟವಾದ ಆಯಾ ವರ್ಷವೇ ಪುಸ್ತಕ ಖರೀದಿಸುವಂತಾಗಬೇಕು, ಬಾಕಿ ಉಳಿದಿರುವ ಪುಸ್ತಕ ಖರೀದಿ ಪ್ರಕ್ರಿಯೆ ಆದಷ್ಟು ಬೇಗ ಮುಗಿಸಬೇಕು ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಪುಸ್ತಕೋದ್ಯಮಕ್ಕೆ ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಸಂಕಷ್ಟದಲ್ಲಿರುವ ಲೇಖಕರು ಹಾಗೂ ಪ್ರಕಾಶಕರಿಗೆ ನೆರವಾಗಲು ಪ್ರಯತ್ನಿಸುತ್ತೇನೆ’ ಅಲ್ಲದೆ ಆಯಾ ವರ್ಷ ಪ್ರಕಟವಾಗುವ ಪುಸ್ತಕಗಳನ್ನು ಖಂಡಿತ ಆಯಾ ವರ್ಷವೇ ಖರೀದಿಸುವಂತಾಗಲು ಪ್ರಯತ್ನಿಸಲಾಗುವುದು. ಗುಣಮಟ್ಟದ ಪುಸ್ತಕ ಮತ್ತು ಓದುಗರಿಗೆ ಅಗತ್ಯವಿರುವ ಪುಸ್ತಕಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುವುದರ ಜತೆಗೆ, ಖರೀದಿ ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಗ್ರಂಥಾಲಯ ನಿರ್ದೇಶಕರಾದ ಡಾ. ಸತೀಶಕುಮಾರ ಹೊಸಮನಿಯವರು ಮಾಹಿತಿ ನೀಡಿ, 2021 ರಲ್ಲಿ ಪ್ರಥಮವಾಗಿ ಮುದ್ರಣಗೊಂಡ 9064 ಪುಸ್ತಕಗಳ ಆಯ್ಕೆಗಾಗಿ ಬಂದಿರುತ್ತವೆ. ಅದರಲ್ಲಿ 5682 ಕನ್ನಡ, 2132 ಇಂಗ್ಲಿಷ್, 1225 ಹಿಂದಿ, ಇತರ ಭಾಷೆ 25 ಪುಸ್ತಕಗಳು ಸಲ್ಲಿಕೆಯಾಗಿವೆ. ಪುಸ್ತಕಗಳನ್ನು ಆಯ್ಕೆ ಮಾಡುವ ಬಗ್ಗೆ ವರ್ಷಕ್ಕೆ ಕನಿಷ್ಠ ಮೂರು ಬಾರಿಯಾದರೂ ರಾಜ್ಯದ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ. ಆಯ್ಕೆಗೆ ಸಲ್ಲಿಸುವ ಎಲ್ಲಾ ಭಾಷೆಗಳ ಪುಸ್ತಕಗಳ ಶೀರ್ಷಿಕೆಯು ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುತ್ತವೆ. ಪುಸ್ತಕ ಆಯ್ಕೆಗಾಗಿ ಪುಸ್ತಕಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಮುದ್ರಣ ಮತ್ತು ನೋಂದಣಿ ಕಾನೂನು ಕಾಪಿರೈಟ್ ಕಾಯ್ದೆ ಮೇರೆಗೆ ಬೆಂಗಳೂರು ರಾಜ್ಯ ಕೇಂದ್ರ ಗ್ರಂಥಾಲಯದ ಕಾಪಿ ರೈಟ್ ವಿಭಾಗದಲ್ಲಿ ಪುಸ್ತಕದ ಮೂರು ಪ್ರತಿಗಳನ್ನು ಉಚಿತವಾಗಿ ಸಲ್ಲಿಸಿ ನೋಂದಾಯಿಸಿರಬೇಕು ಎಂದು ಹೇಳಿದರು
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ, ರಾಜ್ಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಕಿಶನರಾವ್ ಕುಲಕರ್ಣಿ ಸೇರಿದಂತೆ ಉಳಿದೆಲ್ಲ ಸದಸ್ಯರನ್ನು ಡಾ.ಕರಿಗೌಡ ಬೀಚನಹಳ್ಳಿ ಅವರು ಇಲಾಖೆಯ ಪರವಾಗಿ ಸನ್ಮಾನಿಸಿದರು.
ಸಮಿತಿಯ ನೂತನ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.