ಹಿರೇಮುಕರ್ತಿನಾಳ: ಮಂಗ ದಾಳಿ ; 4 ತಿಂಗಳ ಕೂಸಿಗೆ ಗಂಭೀರ ಗಾಯ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೆದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮುಕರ್ತಿನಾಳ ಗ್ರಾಮದಲ್ಲಿ ಮಂಗವೊಂದು ದಾಳಿ ನಡೆಸಿ 4 ತಿಂಗಳ ಕೂಸನ್ನು ಕಚ್ಚಿ ಗಾಯಗೊಳಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಗ್ರಾಮದಲ್ಲಿ ಮಂಗನ ದಾಳಿಗೊಳಗಾದ ಶಿವಾನಿ ತಂದೆ ನಿರುಪಾದಿ ಎಂಬ ನಾಲ್ಕು ತಿಂಗಳ ಮಗು ಇದಾಗಿದೆ.
ಮನೆಗೆ ನುಗ್ಗಿದ ಮಂಗ ಮಗುವಿನ ಕಾಲಿನ ಚಪ್ಪೆಯ ಹಿಂಬದಿ ಗಂಭೀರ ಗಾಯಗೊಳಿಸಿದ್ದು, ತಾವರಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದೆ.

ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. 5 ತಿಂಗಳ ಹಿಂದೆ ಇಂತಹ ಪ್ರಕರಣಗಳು ಗ್ರಾಮದಲ್ಲಿ ನಡೆದಿವೆ. ಮಂಗನ ಉಪಟಳ ಗ್ರಾಮದಲ್ಲಿ ಹೆಚ್ಚಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ಮೆಣೆದಾಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿ ಬೀಡುಬಿಟ್ಟಿರುವ ಕೋತಿಗಳನ್ನು ಸ್ಥಳಾಂತರ ಮಾಡಲು ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಮಂಗಗಳ ಉಪಟಳ ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.