ಜೆಸ್ಕಾಂ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನೀಂದನೆ ; ಪೊಲೀಸ್ ಠಾಣೆಗೆ ದೂರು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ವಿದ್ಯುತ್ ವ್ಯತ್ಯಯ ನೆಪವೊಡ್ಡಿ ಜೆಸ್ಕಾಂ ನೌಕರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲೆಯ ಕುಷ್ಟಗಿ ಹಾಗೂ ದೋಟಿಹಾಳ ಶಾಖಾ ವ್ಯಾಪ್ತಿಯ ಜೆಸ್ಕಾಂ ನೌಕರ ಸಿಬ್ಬಂದಿ ಕೆಲಸಕ್ಕೆ ಗೈರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕುಷ್ಟಗಿ ತಾಲೂಕಿನ ಬ್ಯಾಲಿಹಾಳ ಗ್ರಾಮದ ಹನುಮಂತಪ್ಪ ತಂ.ಬೀರಪ್ಪ ಆಡಿನ್ ಎಂಬ ವ್ಯಕ್ತಿಯೋರ್ವ ತಮಗೆ ಮಾಹಿತಿ ನೀಡದೇ ರಾತ್ರಿ ವೇಳೆ ವಿದ್ಯುತ್ ಪ್ರಸಾರ ಸ್ಥಗಿತಗೊಳಿದ್ದೀರಿ ಏಕೆ ಎಂದು ಕುಷ್ಟಗಿ ಜೆಸ್ಕಾಂ ಉಪ ವಿಭಾಗದ ಶಾಖಾಧಿಕಾರಿ ಸೈಯದ್ ತಾಜುದ್ದೀನ್ ಎಂಬುವರಿಗೆ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ದಾಬಾಯಿಸಿದ್ದಾನೆ. ಈ ಕುರಿತು ಮೊಬೈಲ್ನಲ್ಲಿ ಆಡಿಯೋ ರಿಕಾರ್ಡಿಂಗ್ ಲಭ್ಯವಾಗಿದೆ. ಬೇಕಂತಲೇ ವಿದ್ಯುತ್ ಸ್ಥಗಿತಗೊಳಿಸುವುದಿಲ್ಲ. ವಿದ್ಯುತ್ ಪ್ರಸಾರ ಹಾಗೂ ನಿಲುಗಡೆ ಕುರಿತು ನಮ್ಮ ಜೆಸ್ಕಾಂ ಮೇಲಾಧಿಕಾರಿ ಸೂಚನೆಯಂತೆ ಸಮಯ ಪ್ರಕಾರ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುತ್ತೇವೆ. ಆದರೆ, ಬ್ಯಾಲಿಹಾಳದ ವ್ಯಕ್ತಿ, ಕಚೇರಿ ವ್ಯವಸ್ಥೆ ಬಗ್ಗೆ ಅರಿತುಗೊಳ್ಳದೇ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ 220 ಕೆವಿ ಸ್ಟೇಶನ್ ಸಿಬ್ಬಂದಿಗೂ ಸಹ ಕರೆಮಾಡಿ ಅವಾಚ್ಯ ಪದಗಳಿಂದ ಮಾತನಾಡಿದ್ದಾನೆ.

ನಿಂದನೆ ಘಟನೆಗಳು ಹೆಚ್ಚಳ: ಕೆಲ ತಿಂಗಳಿಂದ ತಾಲೂಕಿನಲ್ಲಿ ನಿಂದನೆ ಘಟನೆಗಳು ಹೆಚ್ಚುತ್ತಿವೆ. ಮನನೊಂದ ಕುಷ್ಟಗಿ ಹಾಗೂ ದೋಟಿಹಾಳ ಶಾಖಾ ವ್ಯಾಪ್ತಿಯ ಜೆಸ್ಕಾಂ ಸಿಬ್ಬಂದಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಂದು ಅನಿವಾರ್ಯವಾಗಿ ಕೆಲಸಕ್ಕೆ ಗೈರಾಗಿ ನಿಂದಿಸಿದ ವ್ಯಕ್ತಿ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದೇವೆ. ನಿಂದನೆ ಮಾಡಿದ ವ್ಯಕ್ತಿ ನಾಪತ್ತೆಯಾಗಿದ್ದು, ಆತನನ್ನು ಕರೆತರಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ವ್ಯಕ್ತಿಯನ್ನು ಕರೆತಂದು ಕ್ರಮಕೈಗೊಳ್ಳುವವರೆಗೂ ಪೊಲೀಸ್ ಠಾಣೆಯಿಂದ ಹಿಂತಿರುಗುವುದಿಲ್ಲ ಎಂದು ಜೆಸ್ಕಾಂ ನೌಕರ ಸಿಬ್ಬಂದಿ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಮಂಜುನಾಥ ಉಪ್ಪಾರ, ಚಂದ್ರಕಾಂತ ಜ್ಞಾನಮೋಟೆ, ಸಂತೋಷ ಜಾಲಿಹಾಳ, ಮೆಹಬೂಬ್ ಕಪಾಲಿ, ಶರ್ಪುದ್ದಿನ್, ಸುಭಾಷ್, ಪರಸಪ್ಪ ಧಮ್ಮೂರು, ಮೌನೇಶ, ಕೆಪಿಟಿಸಿಎಲ್ ಸಹಾಯಕ ಪ್ರಭಾರಿ ಅಬಿಯಂತರ ಮೌನೇಶ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.