ಕುಷ್ಟಗಿಯಲ್ಲಿ ಜಂಗಮ ಸಮುದಾಯದ ಯುವಕನ ಮೇಲೆ ಪಿಎಸ್’ಐ ಹಲ್ಲೆ ಆರೋಪ; ದಿಢೀರ್ ಪ್ರತಿಭಟನೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಂಗಮ ಸಮುದಾಯದ ಯುವಕನನ್ನು ಪಿಎಸ್’ಐ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನಾಗರಿಕರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಶುಕ್ರವಾರ ಜರುಗಿತು

ಪಟ್ಟಣದ ಜಂಗಮ ಸಮುದಾಯದ ಪ್ರಮುಖ ರವಿಕುಮಾರ ಹಿರೇಮಠ ಎಂಬುವರ ಪುತ್ರ ನಂದೀಶ ಎಂಬ ಯುವಕನ ಮೇಲೆ ಸ್ಥಳೀಯ ಪಿಎಸ್ಐ ಮುದ್ದುರಂಗಸ್ವಾಮಿ ಅವರು ಹಲ್ಲೆ ಮಾಡಿದ್ದಾರೆ ಎಂದು ಘಟನೆ ಖಂಡಿಸಿ ಬಸವೇಶ್ವರ ವೃತ್ತದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಜನ ಸಮಾವೇಶಗೊಂಡು ರವಿಕುಮಾರ ಹಿರೇಮಠ ಅವರ ನೇತೃತ್ವದಲ್ಲಿ ದಿಢೀರನೇ ಪ್ರತಿಭಟನೆ ನಡೆಸಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುದ್ದುರಂಗಸ್ವಾಮಿ ಅವರನ್ನು ಅಮಾನತ್ತು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಯಶವಂತ ಬಿಸನಹಳ್ಳಿ ಹಾಗೂ ಕ್ರೈಂ ವಿಭಾಗದ ಪಿಎಸ್ಐ ಮಾನಪ್ಪ ವಾಲ್ಮೀಕಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಸಮಜಾಯಿಷಿ ನೀಡಿದರೂ ಜಗ್ಗದ ಪ್ರತಿಭಟನಾಕಾರರು. ಪ್ರತಿಭಟನೆ ಮುಂದುವರೆಸಿದರು. ಈ ಘಟನೆಯಿಂದ ಕೆಲ ಗಂಟೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ವಿಜಯಕುಮಾರ ಹಿರೇಮಠ ಅವರು ಮಾತನಾಡಿ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಮ್ಮನ ಮಗ ನಂದೀಶ ಗುರುವಾರ ದಿನ ಕುಷ್ಟಗಿಗೆ ಆಗಮಿಸಿದ್ದಾನೆ. ಇಂದು ತನ್ನ ತಾಯಿಗೆ ಎಳೆನೀರು ತರಲೆಂದು ಹೋದಾಗ ಪಿಎಸ್’ಐ ಅವರು ಸ್ಥಳದಲ್ಲಿ ಅವನಿಗೆ ಬೂಟುಕಾಲಿಂದ ಹಲ್ಲೆ ಮಾಡಿರುವುದಲ್ಲದೇ ಸ್ಟೇಷನ್ನಿಗೆ ಕರೆದೊಯ್ದು ಬೆಲ್ಟಿನಿಂದ ಹಲ್ಲೆ ಮಾಡಿದ್ದಾರೆ. ಪಿಎಸ್’ಐ ಮುದ್ದುರಂಗಸ್ವಾಮಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಅಥವಾ ಬೇರೆಡೆ ವರ್ಗಾವಣೆ ಮಾಡುವಂತೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು. ಜೊತೆಗೆ ನಾಳೆ ಶನಿವಾರ ನಾಗರಿಕರ ಪರವಾಗಿ ತಹಸೀಲ್ದಾರ್’ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿ ಪ್ರತಿಭಟನೆ ಸ್ಥಗಿತಗೊಳಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಂಗಮ ಸಮುದಾಯದ ಪ್ರಮುಖ ರವಿಕುಮಾರ ಹಿರೇಮಠ ಅವರು, ಪುಟ್ಪಾತ್ ಮೇಲೆ ವ್ಯಾಪಾರ ನಡೆಸುವವರ ಮೇಲೆಯೂ ಸಹ ಪಿಎಸ್’ಐ ಹಲ್ಲೆ ನಡೆಸಿ ದರ್ಪ ತೋರಿಸಿದ್ದಾರೆ. ಈಗ ಎಳೆನೀರು ತರಲು ಹೋದ ತಮ್ಮ ಮಗನ ಮೇಲೆ ಬೂಟ್ ಕಾಲಿನಿಂದ ಹಲ್ಲೆ ಮಾಡಿದ್ದು ಖಂಡನೀಯ. ತಮ್ಮಂಥವರ ಮೇಲೆಯೇ ಹೀಗಾದರೆ ಜನಸಾಮಾನ್ಯರು, ಬಡವರ ಸ್ಥಿತಿ ಹೇಗಿರುತ್ತದೆ. ಹಾಗಾಗಿ ಪಿಎಸ್’ಐ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಡಿವೈಎಸ್ಪಿ, ಎಸ್ಪಿ ವರಿಗೆ ಈಗಾಗಲೇ ಗಮನಕ್ಕೆ ತರಲಾಗಿದೆ. ಶನಿವಾರ ದಿನ ನಾಗರಿಕರ ಪರವಾಗಿ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಗುವದು ಎಂದು ತಿಳಿಸಿದರು.

ಆರೋಪ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯ ನೀಡಿದ ಪಿಎಸ್’ಐ ಮುದ್ದುರಂಗಸ್ವಾಮಿ ಅವರು, ಯಾರನ್ನು ಅನಗತ್ಯವಾಗಿ ಹೊಡೆದಿಲ್ಲ. ನಂದೀಶ್ ಎಂಬ ಯುವಕ ಸೈಲೆನ್ಸರ್ ಪೈಪ್ ಇಲ್ಲದೇ ಕರ್ಕಶ ಶಬ್ದದೊಂದಿಗೆ ಬೈಕ್ ಕಾಲೇಜು ಅಕ್ಕಪಕ್ಕದಲ್ಲಿ ಬೈಕ್ ಚಲಾಯಿಸುತ್ತಿರುವುದು ಗಮನಿಸಿದ್ದೇನೆ. ಬೆನ್ನಟ್ಟಿ ಹೋದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಬೈಕ್ ನಿಲ್ಲಿಸಿದಾಗ ಯುವಕನನ್ನು ಠಾಣೆಗೆ ಕರೆಯಿಸಿಕೊಂಡು ಎಚ್ಚರಿಕೆ ನೀಡಲಾಗಿದೆ. ಆ ಸಮಯದಲ್ಲಿ ರವಿಕುಮಾರ್ ಹಿರೇಮಠ ಅವರು ಕರೆ ಮಾಡಿ ಯುವಕನನ್ನು ಬಿಟ್ಟು ಕಳುಹಿಸುವಂತೆ ಕೇಳಿಕೊಂಡಾಗ ಕಳುಹಿಸಿಕೊಡಲಾಗಿದೆ. ಪಟ್ಟಣದಲ್ಲಿ ಇತ್ತೀಚೆಗೆ ಯುವಕರು ಜೋರು ಶಬ್ದದೊಂದಿಗೆ ಬೈಕ್ ಓಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಕಾರಣಕ್ಕಾಗಿಯೇ ಯುವಕ ನಂದೀಶ್ ನನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ‌. ಆದರೆ, ಹಲ್ಲೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ರವಿಕುಮಾರ ಹಿರೇಮಠ ಅವರ ಮಗನು ಎಂದು ತಮಗೆ ಗೊತ್ತಿಲ್ಲ. ಅವನ ಅವೈಜ್ಞಾನಿಕ ಚಾಲನೆ ತಪ್ಪಿಗೆ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಲಾಗಿದೆ. ಆದರೆ ಇಲ್ಲಿ ಯಾವುದೇ ದುರುದ್ದೇಶ ಕೂಡಿಲ್ಲ ಎಂದು ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ.

ಸದ್ಯ ಪರಿಸ್ಥಿತಿ ಬುದಿ ಮುಚ್ಚಿದ ಕೆಂಡದಂತಿದೆ. ಇದರಲ್ಲಿ ರಾಜಕೀಯ ಪ್ರವೇಶವಾದರೆ ಶನಿವಾರ ಕುಷ್ಟಗಿ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಆದರೆ ಪೊಲೀಸ್ ಇಲಾಖೆ ಬಂದ್ ಪ್ರತಿಭಟನೆ ಕರೆಗೆ ಅನುಮತಿ ನೀಡಿಲ್ಲ ಹಾಗೂ ನೀಡುವುದಿಲ್ಲ ಎಂದು ಸಿಪಿಐ ಯಶವಂತ ಬಿಸನಹಳ್ಳಿ ಅವರು ತಿಳಿಸಿದ್ದಾರೆ.