ಕುಷ್ಟಗಿ ಆಸ್ಪತ್ರೆ ಮೇಲಿನ ಭ್ರಷ್ಟಾಚಾರ ಆರೋಪ ತನಿಖೆಗೆ ಕ್ರಮ: ಡಿಎಚ್ಒ ಟಿ.ಲಿಂಗರಾಜು

ಮುನೇತ್ರ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮೇಲಿನ ಆರೋಪಗಳ ತನಿಖೆಗೆ ಶೀಘ್ರದಲ್ಲೇ ವಿಶೇಷ ಅಧಿಕಾರಿಗಳ ತನಿಖಾ ತಂಡವನ್ನು ಕಳಿಸಿಕೊಡಲಾಗುವುದು ಎಂದು ಡಿಎಚ್ಒ ಡಾ.ಲಿಂಗರಾಜು ಅವರು ತಿಳಿಸಿದರು.

ಸಾರ್ವಜನಿಕ ದೂರಿನ ಮೇಲೆ ಜಿಲ್ಲೆಯ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳನ್ನು ತಾವು ಗಂಭೀರವಾಗಿ ಪರಿಗಣಿಸಿದ್ದೇನೆ. ನಿರ್ಲಕ್ಷಿಸುವುದಿಲ್ಲ. ಆದರೆ, ಯಾವುದೇ ಆರೋಪಗಳಿರಲಿ ದೂರುದಾರರು ಸಾಕ್ಷ್ಯ ಸಮೇತ ದೂರು ಸಲ್ಲಿಸಬೇಕು. ಬಳಿಕ ಆರೋಪಿತ ವೈದ್ಯ ಸಿಬ್ಬಂದಿ ವಿರುದ್ಧ ನಿರ್ದ್ಯಾಕ್ಷಣವಾಗಿ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ತಮ್ಮ ಇಲಾಖೆಯಲ್ಲಿ ಯಾವುದೇ ಸೇವೆ ಇರಲಿ ಸಂಪೂರ್ಣ ಉಚಿತವಾಗಿರುತ್ತದೆ. ಆದಾಗ್ಯೂ ಸಿಬ್ಬಂದಿ, ರೋಗಿಗಳಿಂದ ಹಣ ನಿರೀಕ್ಷಿಸುವುದು ತಪ್ಪು. ಇದಕ್ಕೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಹಣ ಕೊಡಬಾರದು. ಶೀಘ್ರದಲ್ಲೇ ಈ ಕುರಿತು ಸಾರ್ವಜನಿಕ ಮಾಹಿತಿಗೆ ವಿಶೇಷ ಪ್ರಕಟಣೆ ಹೊರಡಿಸಲಾಗುವುದು ಎಂದ ಡಿಎಚ್ಒ ಲಿಂಗುರಾಜು, ಇತ್ತೀಚೆಗೆ ನರ್ಸ್ ಶೈಲಜಾ ಗೋಣಿ ಎಂಬುವವರ ವಿರುದ್ಧದ ಆರೋಪ ಕುರಿತು ತನಿಖಾ ಹಂತದಲ್ಲಿದ್ದು, ದೂರುದಾರರು ಹಾಗೂ ತನಿಖಾ ಅಧಿಕಾರಿಗಳು ನೀಡಿದ ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

 

ಇತ್ತೀಚೆಗೆ ಗರ್ಭಿಣಿ ಚಿಕಿತ್ಸೆ ಹಂತದಲ್ಲಿ ಮಗು ಸಾವು ಪ್ರಕರಣ ಹಿನ್ನೆಲೆ ವೈದ್ಯರ ಮೇಲಿನ ಆರೋಪಗಳ ಕುರಿತು ದಲಿತ ಸಂಘಟನೆಗಳು ನೀಡಿರುವ ದೂರಿನನ್ವಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಹಾಗೂ ಪಾಲಕರನ್ನು ಭೇಟಿ ಮಾಡಿದ್ದೇನೆ. ಪ್ರಾಥಮಿಕವಾಗಿ ಕೆಲ ಮಾಹಿತಿ ಪಡೆದಿದ್ದೇನೆ. ಈ ಘಟನೆ ಕುರಿತು ವಿಶೇಷ ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು. ಬಳಿಕ ವೈದ್ಯರ ಮೇಲೆ ಕಾನೂನಿನನ್ವಯ ಕ್ರಮಕೈಳ್ಳಲಾಗುವುದು ಎಂದು ಡಿಎಚ್ಒ ಟಿ.ಲಿಂಗುರಾಜು ತಿಳಿಸಿದರು.

ಈ ವೈಳೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಜವಾಬ್ದಾರಿಯಿಂದ ತಜ್ಞವೈದ್ಯ ಡಾ.ಕೆ.ಎಸ್. ರೆಡ್ಡಿ ಅವರು ನುಣುಚಿಕೊಳ್ಳಲು ಯತ್ನಿಸಿದರೂ ಅವರನ್ನು ಯಾವುದೇ ಕಾರಣಕ್ಕೂ ಸದ್ಯ ಬದಲಿಸುವುದಿಲ್ಲ. ಅವರು ತಮ್ಮ ವೈದ್ಯ ಸೇವೆಯೊಂದಿಗೆ ನೀಡಿರುವ ಹೆಚ್ಚಿನ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸಬೇಕು. ಅವರ ಮೇಲಿನ ಹಾಗೂ ಸಿಬ್ಬಂದಿ ಮೇಲಿನ ಆರೋಪಗಳನ್ನು ಸರಿಪಡಿಸಿಕೊಳ್ಳಲು ಅಗತ್ಯ ಸೂಚನೆಗಳನ್ನು ನೀಡಲಾಗುವುದು

                 – ಡಾ.ಟಿ. ಲಿಂಗರಾಜು,

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ , ಕೊಪ್ಪಳ.