ಮಿಟ್ಟಲಕೋಡ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಮಹಾಂತೇಶ ಚಕ್ರಸಾಲಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ: ತಾಲೂಕಿನ ಮಿಟ್ಟಲಕೋಡ ಗ್ರಾಮದಲ್ಲಿ ದಸರಾ ಹಾಗೂ ಗ್ರಾಮದ ಆರಾಧ್ಯ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯ ಪುರಾಣ ಕಾರ್ಯಕ್ರಮ ನಿಮಿತ್ತ ಶುಕ್ರವಾರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಉತ್ತಮ ಮಳೆಯಾಗಲಿ ರೈತರು ಸಮೃದ್ಧವಾಗಿ ಬೆಳೆಗಳನ್ನು ಬೆಳೆಯಲಿ ರೈತರ ಬಾಳು ಬಂಗಾರವಾಗಲಿ ನಾಡು ಸುಭಿಕ್ಷೆವಾಗಿರಲೆಂದು ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ದಸರಾ ನಿಮಿತ್ತವಾಗಿ ಗ್ರಾಮದೇವತೆ ದ್ಯಾಮಾಂಬಿಕಾ ದೇವಸ್ಥಾನದಲ್ಲಿ 9 ದಿನಗಳ ಕಾಲ ಪ್ರತಿದಿನ ಪುರಾಣ ಪ್ರವಚನ ನಡೆಸಿಕೊಂಡು ಬರಲಾಗುತ್ತಿದೆ.

ಶುಕ್ರವಾರ ದಿನ ಬೆಳಿಗ್ಗೆ ದೇವಿ ಮೂರ್ತಿಗೆ ಅಲಂಕಾರ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಮಡಿಯಿಂದ ವಿವಿಧ ಸಿಹಿಖಾದ್ಯಗಳನ್ನು ತಯಾರಿಸಿಕೊಂಡು ಬಂದಿದ್ದ ಮುತ್ತೈದೆಯರು ದೇವಿಗೆ ನೈವೇದ್ಯ ಅರ್ಪಿಸಿ ಉಡಿ ತುಂಬಿ ಭಕ್ತಿ ಮೆರೆದರು. ಬಳಿಕ ಸಂಜೆ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಗ್ರಾಮದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು ಜೊತೆಗೆ ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ತಿಳಿಸಲಾಯಿತು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಈ ಎಲ್ಲಾ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಅಮರಪ್ಪ ಪಿಡ್ರಾವತಾರ, ಯಂಕಪ್ಪ ಶೇಮೆರ, ಬಾಳಪ್ಪ ವತ್ತಿ, ಪುತ್ರಪ್ಪ ಭಂಡಾರಿ, ಶರಣಪ್ಪ ಮಾಳಿ, ಹನುಮಂತ ಭಂಡಾರಿ, ಮಲ್ಲಪ್ಪ ಪಿಡ್ರಾವತರ, ಅರ್ಚಕರಾದ ಚಿದಾನಂದ ಮಠದ, ಯಚ್ಚರಪ್ಪ ಬಡಿಗೇರ, ಮೌನೇಶ ಬಡಿಗೇರ ಸೇರಿದಂತೆ ಮಹಿಳೆಯರು, ಮಕ್ಕಳು, ಯುವಕರು ಪಾಲ್ಗೊಂಡಿದ್ದರು.