ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ನಿಗದಿತ ಸಮಯದಲ್ಲಿ ಮಳೆ ಬೆಳೆಯಿಲ್ಲದೇ ಸಾಲದ ಸುಳಿಗೆ ಸಿಲುಕಿದ ಜಿಲ್ಲೆಯ ಕುಷ್ಟಗಿ ತಾಲೂಕಿನ ರೈತನೊಬ್ಬ ಗುರುವಾರ ನೇಣಿಗೆ ಶರಣಾಗಿದ್ದಾನೆ.
ತಾಲೂಕಿನ ಗುಡಿಕಲಕೇರಿ ಸೀಮಾ ವ್ಯಾಪ್ತಿಯ ಜಮೀನೊಂದರಲ್ಲಿ ಈ ಘಟನೆ ಜರುಗಿದೆ. ಮೂಲತಃ ತಾಲೂಕಿನ ಬೋದೂರು ಗ್ರಾಮದ ಸುಮಾರು 50 ವಯಸ್ಸಿನ ಕೃಷ್ಣಪ್ಪ ತಂ. ಲಚಮಪ್ಪ ರಾಠೋಡ ನೇಣಿಗೆ ಶರಣಾದ ದುರ್ದೈವಿ ರೈತ. ಈತನಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಇಳಕಲ್ಲಿನ ಪ್ರತಿಷ್ಠಿತ ಬ್ಯಾಂಕ್ ಸೇರಿದಂತೆ ಬೇರೆಡೆಯೂ ಕೈ ಸಾಲ ಪಡೆದು ತನ್ನ 4 ಎಕರೆ 18 ಗುಂಟೆ ಜಮೀನಿನಲ್ಲಿ ಹತ್ತು ಕೊಳವೆಭಾವಿ ಕೊರೆಯಿಸಿದ್ದ. ಅದರಲ್ಲಿ ಒಂದು ಕೊಳವೆಬಾವಿಯಲ್ಲಿ ಅಲ್ಪ ನೀರು ಲಭ್ಯವಾಗಿತ್ತು. ಆದರೆ, ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಅಂತರ್ಜಲ ಬತ್ತಿದ ಪರಿಣಾಮ ಬೆಳೆ ಕೈಗೆಟುಕದೇ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಇದೆ ವೇಳೆ ಸಾಲಗಾರರ ಕಿರುಕುಳ ತಾಳಲಾರದೆ ನೊಂದ ರೈತ, ತನ್ನ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬದ ಮೂಲಗಳು ಹೇಳುತ್ತವೆ. ಮೃತದೇಹವನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಮರಣೋತ್ತರ ಪರೀಕ್ಷೆ ಬಳಿಕ ರಾತ್ರಿ ಅಂತ್ಯಸಂಸ್ಕಾರ ನೆರವೇರಿಸಲಾಗಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಒಟ್ಟಿನಲ್ಲಿ ಕುಷ್ಟಗಿ ತಾಲೂಕು ತೀರಾ ಬರಪೀಡಿತ ಪ್ರದೇಶವೆಂದು ಘೋಷಣೆಯಾದ ಬಳಿಕ ಸಂಕಷ್ಟಕ್ಕೆ ಸಿಲುಕಿದ ರೈತನ ಮೊದಲ ಬಲಿ ಇದಾಗಿದೆ.