ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಪುಟ್ಪಾತ್ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತಿದ್ದ ವ್ಯಾಪಾರಿಗಳ ಗೂಡಂಗಡಿಗಳನ್ನು ಪುರಸಭೆ ಮುಖ್ಯಾಧಿಕಾರಿಗಳು ಶನಿವಾರ ತೆರವು ಕಾರ್ಯಾಚರಣೆ ನಡೆಸಿದರು.
ಪಟ್ಟಣದ ಪುರಸಭೆ ಮುಂಭಾಗದ ಪ್ರದೇಶದಲ್ಲಿ ಹಾಗೂ ರಸ್ತೆ ಪಕ್ಕದ ಪುಟ್ಪಾತ್ ಜಾಗೆಯನ್ನು ಆಕ್ರಮಿಸಿಕೊಂಡ ಗೂಡಂಗಡಿ ವ್ಯಾಪಾರಿಗಳಿಗೆ ಸೆಪ್ಟೆಂಬರ್ 29 ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ ಅವರು ಅತಿಕ್ರಮಣ ಮಾಡಿಕೊಂಡಿದ್ದ ಪುರಸಭೆ ಮಳಿಗೆಗಳು ಹಾಗೂ ಪುಟ್ಪಾತ್ ಜಾಗೆಯಲ್ಲಿನ ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದರು. ಅದರಂತೆ, ಪುರಸಭೆ ಅಧಿಕಾರಿಗಳು ಮತ್ತೊಮ್ಮೆ ಕಳೆದ ವಾರದ ಹಿಂದೆ ಗೂಡಂಗಡಿಗಳನ್ನು ತೆರವು ಮಾಡಿಕೊಳ್ಳುವಂತೆ ಕಾಲಾವಕಾಶ ಕಲ್ಪಿಸಿದ್ದರು. ಜೊತೆಗೆ ಬಸವೇಶ್ವರ ವೃತ್ತದ ಬಳಿ ನ್ಯಾಯಾಲಯದ ತಡೆಗೋಡೆಗೆ ಹೊಂದಿಕೊಂಡು ಬಸ್ ತಂಗು ನಿಲ್ದಾಣದಲ್ಲಿ ಅತಿಕ್ರಮಣ ಮಾಡಿದ್ದ ಅಂಗಡಿಗಳನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಪುರಸಭೆ ಮುಂಭಾಗದ ಗೂಡಂಗಡಿಗಳಿಗೆ ನೀಡಿದ್ದ ಕಾಲಾವಕಾಶ ಮೀರಿದ್ದರ ಹಿನ್ನೆಲೆ ಇಂದು ಶನಿವಾರ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರು ಮುಂದೆನಿಂತು ಸಿಬ್ಬಂದಿ ಕಡೆಯಿಂದ ಹೋಟೇಲ ಸೇರಿದಂತೆ ಇತರೆ ಗೂಡಂಗಡಿಗಳನ್ನು ತೆರವುಗೊಳಿಸಿದರು.
ಪುಟ್ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ. ಎಲ್ಲವನ್ನೂ ಒಮ್ಮೆಲೆ ತೆರವುಗೊಳಿಸುವುದಿಲ್ಲ. ಹಂತ ಹಂತವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳುತ್ತೇವೆ. ಪಟ್ಟಣದ ಟ್ರಾಫಿಕ್ ಸಮಸ್ಯೆ ನೀಗಿಸಲು, ಸಾರ್ವಜನಿಕರು ಸಂಚರಿಸಲು ಫುಟ್ಪಾತ್ ವ್ಯವಸ್ಥೆ ಮಾಡಲಾಗಿದೆ. ಬೀದಿಬದಿ ವ್ಯಾಪಾರಸ್ಥರಿಗೆ ತಳ್ಳೋಬಂಡಿಯಲ್ಲಿ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪುಟ್ಪಾತ್ ಜಾಗೆಯನ್ನು ತಮ್ಮದೇ ಎಂದು ಗುರುತಿಸಿಕೊಂಡು ವ್ಯಾಪಾರ ಮಾಡಲು ಅವಕಾಶವಿಲ್ಲ. ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಬೇಕು ಎಂಬುದು ಪುರಸಭೆ ಉದ್ಧೇಶ.
– ಧರಣೇಂದ್ರಕುಮಾರ
ಮುಖ್ಯಾಧಿಕಾರಿ, ಪುರಸಭೆ ಕುಷ್ಟಗಿ.