ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಇತ್ತೀಚೆಗೆ ನಡೆದ ನಗರ ಠಾಣೆ ಸೇರಿದಂತೆ ಜಿಲ್ಲೆಯ ಮುನಿರಾಬಾದ, ಗಂಗಾವತಿ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ 19 ವಯಸ್ಸಿನ ಪ್ರತಾಪ ಎಂಬ ಯುವಕ ಕಳ್ಳತನ ಮಾಡಿದ ಆರೋಪಿ. ಅ.18 ರಂದು ಕೊಪ್ಪಳದ ಸಿದ್ದೇಶ್ವರ ನಗರದಲ್ಲಿನ ಮನೆಯಲ್ಲಿನ ಒಟ್ಟು 1,27,500 ರೂ. ಬೆಲೆಬಾಳುವ ವಿವಿಧ ಬಂಗಾರದ ಒಟ್ಟು 24 ಗ್ರಾಮ್ ತೂಕದ ಆಭರಣಗಳು ಕಳ್ಳತನವಾಗಿತ್ತು. ಪ್ರಕರಣವನ್ನು ಭೇದಿಸಲು ಎಸ್ಪಿ ಯಶೋಧಾ ವಂಟಿಗೋಡಿ ಅವರು ಹಾಗೂ ಡಿ.ಎಸ್.ಪಿ ಶರಣಪ್ಪ ಸುಭೇದಾರ ಅವರ ಮಾರ್ಗದರ್ಶನದಲ್ಲಿ ಸಂತೋಷ ಡಿ ಹಳ್ಳೂರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಪಿ.ಎಸ್.ಐ ಶರಣಪ್ಪ ಕಟ್ಟಿಮನಿ, ಪಿ.ಎಸ್.ಐ ಉಮೇರಭಾನು, ಎಎಸೈ ದೊಡ್ಡಯ್ಯ ಮಳಿಮಠ ಹಾಗೂ ಸಿಬ್ಬಂದಿ ಖಾಜಾಸಾಬ ದಫೆದಾರ, ಕನಕಪ್ಪ, ರಾಜಶೇಖರ, ದೇವೆಂದ್ರ ಹನುಮೇಶ, ಲಕ್ಷ್ಮಿದೇವಿ ಮಪಿಸಿ, ಕುಮಾರಸ್ವಾಮಿ ಪಿಸಿ ಹಾಗೂ ಸಿ.ಡಿ.ಆರ್ ಸಿಬ್ಬಂದಿ ಕೊಟೇಶ, ಪ್ರಸಾದ ಮತ್ತು ಬೆರಳು ಮುದ್ರೆ ಘಟಕ ಸಿಬ್ಬಂದಿ ಸಂತೋಷ ರವರನ್ನೊಳಗೊಂಡ ತಂಡ ಶೋಧ ಕಾರ್ಯ ಕೈಗೊಂಡಿದ್ದರು.
ಅ.27 ರಂದು ಅಪರಾಧ ವಿಭಾಗದ ಸಿಬ್ಬಂದಿ ಖಾಜಾಸಾಬ, ರಾಜಶೇಖರ, ದೇವೆಂದ್ರ, ಹನುಮೇಶ ರವರು ಕಿನ್ನಾಳ ಗ್ರಾಮದಲ್ಲಿ ಆರೋಪಿತನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿತ ಪ್ರತಾಪ ಮುಚಿಗೇರ ಬಾಯ್ಬಿಟ್ಟಿದ್ದು,
ಕೊಪ್ಪಳ ನಗರ ಠಾಣೆಯಲ್ಲಿ ದಾಖಲಾದ 1,30,000 ರೂ. ಬೆಲೆ ಬಾಳುವ 26 ಗ್ರಾಂ ಚಿನ್ನಾಭರಣ ಕಳುವಾದ ಪ್ರಕರಣ, 1,20,000 ರೂ. ಬೆಲೆ ಬಾಳುವ 24 ಗ್ರಾಂದ ವಿವಿಧ ಚಿನ್ನಾಭರಣ ಕಳುವಾದ ಪ್ರಕರಣ, ಜಿಲ್ಲೆಯ ಮುನಿರಾಬಾದ ಠಾಣೆಯಲ್ಲಿ ದಾಖಲಾದ 1,50,000 ರೂ. ಬೆಲೆ ಬಾಳುವ 30 ಗ್ರಾಂ ಬಂಗಾರದ ವಿವಿಧ ಆಭರಣಗಳು ಮತ್ತು 10,500/-ರೂ. ನಗದು ಕಳ್ಳತನ ಪ್ರಕರಣ ಒಪ್ಪಿಕೊಂಡಿದ್ದು, ಆರೋಪಿತನಿಂದ ಒಟ್ಟು 4 ಪ್ರಕರಣಗಳಲ್ಲಿ ಒಟ್ಟು 80 ಗ್ರಾಂ, ಚಿನ್ನಾಭರಣ ಮತ್ತು 10,500/- ರೂ. ನಗದು ಸೇರಿ ಒಟ್ಟು 4,58,500/-ರೂಗಳ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣ ವರದಿಯಾದ 10 ದಿನಗಳಲ್ಲಿ ಆರೋಪಿತನನ್ನು ಪತ್ತೆ ಮಾಡಿದ ಅಧಿಕಾರಿ, ಸಿಬ್ಬಂದಿಗೆ ಎಸ್ಪಿ ಯಶೋಧಾ ವಂಟಗೋಡಿ ಅವರು ಶ್ಲಾಘಿಸಿದ್ದಾರೆ.