ಕುಷ್ಟಗಿ ಬಸ್ ನಿಲ್ದಾಣದಲ್ಲಿ ಅಹಿತಕರ ಘಟನೆ ತಡೆಗೆ ಪೊಲೀಸ್ ಚೌಕಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಅಹಿತಕರ ಘಟನೆ ತಡೆಗೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲೆಯ ಕುಷ್ಟಗಿ ಪಟ್ಟಣದ ಸಾರಿಗೆ ಸಂಸ್ಥೆಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಶನಿವಾರ ನೂತನವಾಗಿ ಪೊಲೀಸ್ ಚೌಕಿ ಉದ್ಘಾಟಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ ಅವರ ಆದೇಶದ ಮೇರೆಗೆ ಪೊಲೀಸರಿಗಾಗಿಯೇ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ಎರಡು ವಿಚಾರಣಾ ಕೊಠಡಿಗಳಲ್ಲಿ ಒಂದನ್ನು ಪೊಲೀಸ್ ಚೌಕಿಯನ್ನಾಗಿ ಪರಿವರ್ತಿಸಿ ಪೂಜೆ ನೆರವೇರಿಸಲಾಗಿಯಿತು.

ಈ ವೇಳೆ ಕಂಟ್ರೋಲರ ಜಯಪ್ರಕಾಶ್, ಎಎಸ್’ಐ ಬಸವರಾಜ, ಹೆಡ್’ಕಾನ್ಸಟೇಬಲ್ ಲಕ್ಷ್ಮಣ, ಸಾರಿಗೆ ಇಲಾಖೆ ನೌಕರ ಜಿಲಾನಿ ಕಪಾಲಿ, ಹನುಮಂತ ತೆಗ್ಗಿಹಾಳ, ಮೈಲಾರಗೌಡ ತಳುವಗೇರಾ, ಹಮಾಲಿ ದುರುಗೇಶ ಹಕ್ಕಲ್ ಇನ್ನಿತರರಿದ್ದರು.

ಪ್ರತಿನಿತ್ಯ ಸುಮಾರು 540 ಕ್ಕೂ ಅಧಿಕ ಸಾರಿಗೆ ಬಸ್ಸುಗಳು ಸಂಚರಿಸುವ ಈ ಕೇಂದ್ರೀಯ ನಿಲ್ದಾಣದಲ್ಲಿ ಹಗಲು ರಾತ್ರಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ನಿತ್ಯ ಒಂದಿಲ್ಲೊಂದು ನಡೆಯುವ ಪಿಕ್ ಪಾಕೀಟ್, ಚೈನ್ ಕಳ್ಳತನ, ಮೊಬೈಲ್ ಕಳ್ಳತನ ಸೇರಿದಂತೆ ಅಹಿತಕರ ಘಟನೆ ತಡೆಯಲು ಇಂದಿನಿಂದ ಪೊಲೀಸ್ ಸಿಬ್ಬಂದಿ ಕಾರ್ಯಪ್ರೌವೃತ್ತರಾಗಿದ್ದು, ಇನ್ಮುಂದೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ರಕ್ಷಣೆ ಸಿಗಲಿದೆ.