‘ಅನಗತ್ಯ ವಿದ್ಯುತ್ ಕಡಿತವಾದರೆ ರೈತರೊಂದಿಗೆ ಕಚೇರಿಗೆ ಮುತ್ತಿಗೆ, : ಶಾಸಕ ಡಿ.ಎಚ್. ಪಾಟೀಲ್

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ರೈತರ ಕೃಷಿ ಪಂಪ್ಸೆಟ್’ಗಳಿಗೆ 7 ತಾಸು ವಿದ್ಯುತ್ ಪೂರೈಸಲು ಸರ್ಕಾರ ತೀರ್ಮಾನ ಪ್ರಕಟಿಸಿದ್ದು, ಜೆಸ್ಕಾಂ ಅಧಿಕಾರಿಗಳು ಇಂದಿನಿಂದಲೇ ಕೊಡವ ವ್ಯವಸ್ಥೆ ಮಾಡಿಕೊಳ್ಳಬೇಕು. ತಪ್ಪಿದರೆ ರೈತರೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಶಾಸಕ ದೊಡ್ಡನಗೌಡ ಪಾಟೀಲ್ ಎಚ್ಚರಿಕೆ ನೀಡಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಏಳು ತಾಸು ನಿರಂತರ ವಿದ್ಯುತ್ ಪೂರೈಕೆ ಕುರಿತು ತಾಲೂಕಿನ ಎಲ್ಲಾ ಶಾಖಾಧಿಕಾರಿಗಳಿಗೆ ಸೂಚನೆ ನೀಡಬೇಕು. ವಿದ್ಯುತ್ ಪೂರೈಕೆ ಕಡಿತಗೊಳಿಸುವ ಸಾಧ್ಯತೆ ಇದ್ದರೆ ಕುರಿತು ಮೊದಲೇ ರೈತರ ಗಮನಕ್ಕೆ ತರಲು ಪ್ರಕಟಣೆ ಹೊರಡಿಸಬೇಕು. ಅದೇರೀತಿ ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಅಡಚಣೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಡೆಂಗ್ಯೂ ಪ್ರಕರಣಗಳು: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಸರ ಸ್ವಚ್ಛತೆಗೆ ಹಾಗೂ ಚಿಕಿತ್ಸೆಗೆ ಬರುವ ರೋಗಿಗಳೊಂದಿಗೆ ಸರಿಯಾಗಿ ವರ್ತಿಸಬೇಕು. ತಾಲೂಕಿನ ಕೆಲ ಗ್ರಾಮಗಳಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗಿ ಚಿಕ್ಕಮಕ್ಕಳು ಹಾಗೂ ಹಿರಿಯರು ಪರದಾಡುವಂತಾಗಿದೆ. ಅಲ್ಲದೆ ಸಾರ್ವಜನಿಕ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು.100 ರೂ. ಅಕ್ರಮವಾಗಿ ಪಡೆಯುತ್ತಿದ್ದಾರೆ. ಈ ಕುರಿತು ವೈದ್ಯರು ಸೇರಿದಂತೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಲು ಟಿಎಚ್ಒ ಆನಂದ ಗೋಟೂರಗೆ ಶಾಸಕ ದೊಡ್ಡನಗೌಡ ಸೂಚನೆ ನೀಡಿದರು.

ಕುಡಿಯುವ ನೀರು: ತಾಲೂಕಿನ 177 ಹಳ್ಳಿಗಳಿಗೆ 7 ತಿಂಗಳು ಕಾಲ ಕುಡಿಯುವ ನೀರು ಪೂರೈಸಲು ಜಲಾಶಯದಲ್ಲಿ ನೀರು ಸಂಗ್ರಹ ಇದೆ. ಬಾಗಲಕೋಟೆ ಮಾರ್ಗ ಪೈಪ್ಲೈನ್ ಸಮಸ್ಯೆ ಹಿನ್ನೆಲೆ ಸಮರ್ಪಕವಾಗಿ ನೀರು ಪೂರೈಸಲು ಸಮಸ್ಯೆ ಎದುರಾಗಿದೆ. ಶೇ.99ರಷ್ಟು ಕುಡಿಯುವ ನೀರು ಪೈಪು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪ್ರಾಯೋಗಿಕವಾಗಿ ನೀರು ಹರಿಸಲಾಗುತಿದ್ದು, ಅಲ್ಲಲ್ಲಿ ಪೈಪುಗಳು ಒಡೆದು ದುರಸ್ತಿಗೊಳ್ಳುತ್ತಿವೆ. ನಿರಂತರ ಕಾರ್ಯ ನಡೆಯುತ್ತಿದ್ದು, ಬೇಸಿಗೆ ದಿನಗಳಲ್ಲಿ ನೀರಿನ ತಾಪತ್ರೆಯ ಆಗದಂತೆ ಎಲ್ಲಾ ರೀತಿಯಕ್ರಮಕೈಗೊಳ್ಳುತ್ತೇವೆ ಎಂದು ಸಂಬಂಧಿಸಿದ ಅಧಿಕಾರಿ ವಿಜಯಕುಮಾರ್, ಶಾಸಕ ದೊಡ್ಡನಗೌಡರಿಗೆ ತಿಳಿಸಿದರು. ಜೆಜೆಎಂ ಕಾಮಗಾರಿ ಪೈಪ್ಲೈನ ಅಳವಡಿಕೆ ಆಳವಾಗಿ ಅಳವಡಿಸಿಲ್ಲ ಕಳಪೆಯಾಗಿದೆ. ವೈಜ್ಞಾನಿಕ ಕಾಮಗಾರಿ ಸಂಪೂರ್ಣ ಬಳಿಕ ಗ್ರಾಪಂ ಸುಪರ್ದಿಗೆ ವಹಿಸುವಾಗ ತಮ್ಮ ಗಮನಕ್ಕೆ ತರಬೇಕು. ಈ ಕುರಿತು ಪಿಡಿಒಗಳಿಗೆ ಇಓ ಸೂಚನೆ ನೀಡಬೇಕು ಎಂದು ಶಾಸಕ ದೊಡ್ಡನಗೌಡ ಸೂಚಿಸಿದರು.

ಶಿಕ್ಷಣ: ಎಲೆ ಅಡಿಕೆ, ಗುಟ್ಕಾ, ಮದ್ಯಸೇವಿಸಿ ಪಾಠ ಮಾಡುವ ಶಿಕ್ಷಕರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ನಾಮನಿರ್ದೇಶನ ಸದಸ್ಯರು ಸಭೆ ಗಮನಕ್ಕೆ ತಂದರು. ಆಗ ಶಾಸಕ ದೊಡ್ಡನಗೌಡ, ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಹಾಜರಿ ಪರಿಶೀಲಿಸಬೇಕು, ಬೋಧನೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಕೊಂಡು ಶಿಕ್ಷಕ ಘನತೆ ಕಾಪಾಡಬೇಕು. ತಪ್ಪು ಎಸುಗುವ ಶಿಕ್ಷಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅದೇರೀತಿ ತಾಲೂಕಿನಲ್ಲಿ 120 ಶಿಕ್ಷಕರು ಕೊರತೆಯಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ಕೊರತೆ ನಿಭಾಯಿಸಲು ಮೇಲಾಧಿಕಾರಿಗಳ ಮಾರ್ಗದರ್ಶನ ಪಡೆದು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬಿಇಒ ಸುರೇಂದ್ರ ಕಾಂಬಳೆ ಅವರಿಗೆ ಸೂಚಿಸಿದರು.

ಮೊಟ್ಟೆ ಕಳ್ಳತನ: ತಾಲೂಕಿನ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತರು ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿದ್ದರೂ ದಾಖಲೆಯಲ್ಲಿ ಹೆಚ್ಚಿನ ಸಂಖ್ಯೆಯ ಹಾಜರಾತಿ ತೋರಿಸಿ ಮೊಟ್ಟೆಗಳ ಕಳ್ಳತನ ಮಾಡುತ್ತಿದ್ದಾರೆ. ಜೊತೆಗೆ ಕಳಪೆ ಮಟ್ಟದ ಆಹಾರ ಧಾನ್ಯ ಬಳಸಿ ಆಹಾರ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದಾರೆ ಎಂದು ಕೆಡಿಪಿ ಸದಸ್ಯರು ಸಭೆ ಗಮನಕ್ಕೆ ತಂದರು. ಆಗ ಶಾಸಕ ಮಧ್ಯಪ್ರವೇಶಿಸಿ ಕೂಡಲೇ ಮೇಲ್ವಿಚಾರಕರನ್ನು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವಂತೆ ಶಾಸಕ ದೊಡ್ಡನಗೌಡ ಸಿಡಿಪಿಒ ಯಲ್ಲಮ್ಮ ಹಂಡಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್, ತಾಪಂ ಇಒ ನಿಂಗಪ್ಪ ಮಸಳಿ, ಸಹಕಾರ ಸಂಘಗಳ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ನಾಮನಿರ್ದೇಶಿತ ಸದಸ್ಯರಾದ ಶಾಮರಾವ್ ಕುಲಕರ್ಣಿ, ಸಿದ್ದನಗೌಡ ಪಾಟೀಲ್, ನಿರ್ಮಲಾ ಮಹಾಂತೇಶ ಕರಡಿ, ಯಲ್ಲಪ್ಪ ಲಕ್ಷ್ಮಪ್ಪ ಬಾಗಲಿ, ಹನುಮಗೌಡ ಪಾಟೀಲ್, ಸೈಯದ್ ಅನ್ವರ್ ಅತ್ತಾರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಹಾಜರಿದ್ದರು.