ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಸರ್ಕಾರಿ ಶಾಲೆಗಳು ಉದ್ಧಾರವಾಗಲು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸುವವರಿಗೆ ಮಾತ್ರ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಬೇಕೆಂಬ ನಿಯಮ ಸರ್ಕಾರ ಜಾರಿಗೆ ತರಬೇಕು ಎಂದು ಅಪ್ಪಟ ಕನ್ನಡಿಗ ಹೋರಾಟಗಾರ ಶರಣಪ್ಪ ಹೂಗಾರ ಅವರು ಒತ್ತಾಯಿಸಿದ್ದಾರೆ.
ಮೈಸೂರು ರಾಜ್ಯ ಕರ್ನಾಟಕವಾಗಿ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ರಾಜ್ಯ ಸರ್ಕಾರ ನಾಡಿನ ಜನತೆಗೆ ವಿಶೇಷವಾಗಿ ಸಂಭ್ರಮಾಚರಿಸಲು ಕರೆ ನೀಡಿದ್ದು, ಈ ಕುರಿತು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಾಧ್ಯಮಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 50ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಆಚರಣೆಗೆ ಕರೆ ನೀಡಿರುವುದು ದೊಡ್ಡಸ್ಥನಕ್ಕೆ ಮಾತ್ರ. ಆದರೆ, ಕನ್ನಡ ಭಾಷೆ ಉಳಿವಿಗೆ ಏನು ಎಚ್ಚೆತ್ತುಕೊಂಡಿದೆ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿಸುತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿಸಲು ಕ್ರಮಕೈಗೊಳ್ಳುತ್ತಿಲ್ಲ. ಏನಾದರು ಆಗು ಮೊದಲು ಮಾನವನಾಗು ಎನ್ನುವ ಹಾಗೆ ನಾಡಿನ ಪ್ರತಿಯೊಬ್ಬರಲ್ಲೂ ಏನಾದರೂ ಆಗು ಮೊದಲು ಕನ್ನಡಿಗನಾಗಬೇಕೆಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದ ಸರ್ಕಾರ, ಪೂರ್ವ ಪ್ರಾಥಮಿಕದಿಂದಲೇ ಆಂಗ್ಲ ಶಿಕ್ಷಣಕ್ಕೆ ಒತ್ತು ನೀಡಿರುವುದು ಎಷ್ಟು ಸರಿ. ಆದರೆ, ಮೊದಲು ಮನೆ ನಿರ್ಮಾಣಕ್ಕೆ ಬುನಾದಿ ಹೇಗೆ ಮುಖ್ಯವೋ ಹಾಗೆಯೇ ಮಗುವಿಗೆ ಮೊದಲು ತಾಯಿ ಭಾಷೆ ಕನ್ನಡದಲ್ಲಿ ಶಿಕ್ಷಣ ನೀಡಬೇಕು. ಆಗ ಮಾತ್ರ ಮಗು ಸಮಾಜದಲ್ಲಿ ಸದೃಢವಾಗಿ ಬೆಳೆಯಲು ಸಾಧ್ಯ. ಆಂಗ್ಲಕ್ಕೆ ಪ್ರಾತಿನಿಧ್ಯ ನೀಡಿದರೆ, ಮಕ್ಕಳು ಒತ್ತಡಕ್ಕೆ ಒಳಗಾಗಿ ಖಿನ್ನತೆಯಿಂದ ಬಳಲುತ್ತವೆ. ಇದರಿಂದ ಕನ್ನಡ ಭಾಷೆಗೆ ಧಕ್ಕೆಯಾಗುತ್ತದೆ ಎಂದರು.
ಒಬ್ಬ ರೈತ ಖರೀದಿಸುವ ಗೊಬ್ಬರ ಚೀಲ ಹೆಸರು ಸಹ ಆಂಗ್ಲಮಯವಾಗಿದೆ. ಕನ್ನಡದಲ್ಲೇಕೆ ಹೆಸರು ನಮೂದಿಸುತ್ತಿಲ್ಲ. ಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಉತ್ತರ ಭಾರತದಲ್ಲಿ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಪ್ರವಾಸ ಮಾಡಿ ಅಲ್ಲಿನ ನಾಡು-ನುಡಿ, ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿರುವೆ. ಅಲ್ಲಿರುವವರ ಭಾಷಾಭಿಮಾನ ಹಾಗೂ ಹೋರಾಟದ ನಡೆಯನ್ನು ಕಂಡಿರುವೆ. ಆದರೆ, ನಮ್ಮವರಿಗೆ ನಾಚಿಕೆಯಾಗಬೇಕು ಕನ್ನಡ ಭಾಷೆಗಾಗಿ ಯಾರೂ ಹೋರಾಟ ಮಾಡುವುದಿಲ್ಲ. ಹೋರಾಟದ ನೆಪದಲ್ಲಿ ರಾಜಕೀಯ ಮಾಡುವವರೇ ಜಾಸ್ತಿಯಾಗಿದೆ. ಅವರಿಗೆ ಕನ್ನಡ ಎಂದರೇನು ಗೊತ್ತಿಲ್ಲ. ಅದರ ಉಚ್ಚಾರಣೆಯೂ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಿಂದ ತೆರೆಗೆ ಹಣ ಪಡೆಯುವ ಕೇಂದ್ರ ಸರ್ಕಾರ, ತನ್ನ ಅಧೀನದಲ್ಲಿ ಬರುವ ಇಲಾಖೆಗಳಲ್ಲಿ ಕನ್ನಡ ಆಡಳಿತ ಭಾಷೆಗೆ ಆಧ್ಯತೆ ನೀಡುತ್ತಿಲ್ಲ. ಬ್ಯಾಂಕುಗಳನ್ನು ಕನ್ನಡದಲ್ಲಿ ಧನಾಲಯವೆಂದು ಕರೆಯಬೇಕು. ಅಲ್ಲಿನ ಪ್ರತಿಯೊಂದು ವ್ಯವಹಾರ ಕನ್ನಡ ಭಾಷೆಯಲ್ಲಿರಬೇಕು. ಕನ್ನಡ ಭಾಷೆಗೆ ನೆಲೆ ಬರಬೇಕಾದರೆ, ಪ್ರತಿಯೊಬ್ಬರೂ ಕನ್ನಡ ಭಾಷೆ ಬಳಸಬೇಕು ಅಂದಾಗ ಮಾತ್ರ ಬೆಲೆ ಬರುತ್ತದೆ. ಎಲ್ಲಾ ಕನ್ನಡದ ಮನಸ್ಸುಗಳು ಕನ್ನಡಿಗರು ಕನ್ನಡದ ಮೇಲೆ ಕಾಳಜಿಯಿಡಿ ಅಂದಾಗ ಮಾತ್ರ 50ನೇ ಕನ್ನಡ ರಾಜ್ಯೋತ್ಸವಕ್ಕೆ ಬೆಲೆ ಬರುತ್ತದೆ ಎಂದು ಅಪ್ಪಟ ಕನ್ನಡಿಗ ಶರಣಪ್ಪ ಹೂಗಾರ ತಮ್ಮ ಮನದಾಳ ಮಾತನ್ನು ಬಿಚ್ಚಿಟ್ಟರು.