ಕುಷ್ಟಗಿಯಲ್ಲಿ ಸರಣಿ ಕಳ್ಳತನಕ್ಕೆ ಯತ್ನ; ಎಸ್’ಬಿಐ ಗ್ರಾಹಕರ ಸೇವಾ ಕೇಂದ್ರದಲ್ಲಿ ₹50 ಸಾವಿರ ಕಳ್ಳತನ ?!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸರಣಿ ಕಳ್ಳತನ ಯತ್ನ ನಡೆದ್ದಿದ್ದು, ಎಸ್’ಬಿಐ ಗ್ರಾಹಕ ಸೇವಾ ಕೇಂದ್ರದಲ್ಲಿ ಸುಮಾರು 50 ಸಾವಿರ ರೂಪಾಯಿ ನಗದು ಹಣ ಕಳ್ಳರು ದೋಚಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಪಟ್ಟಣದ ಮಾರುತಿ ವೃತ್ತದ ಬಳಿಯ ವಾಚ್ ರಿಪೇರಿ ಅಂಗಡಿಯಲ್ಲಿ ನಾಲ್ನೂರು ರೂಪಾಯಿ ದೋಚಿದ್ದಾರೆ., ಪಕ್ಕದ ಎಸ್’ಬಿಐ ಗ್ರಾಹಕ ಸೇವಾ ಕೇಂದ್ರ ಬೀಗ ಮುರಿದು ಒಳಗಿದ್ದ ಸುಮಾರು 50 ಸಾವಿರ ರೂಪಾಯಿ ದೋಚಿದ್ದಾರೆ ಎಂದು ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ ತಿಳಿಸಿದ್ದಾರೆ.

ಎದುರಿನ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಕೊಟ್ರೇಶ್ ಅವರ ಝರಾಕ್ಸ್ ಅಂಗಡಿಯ ಬೀಗ ಮುರಿಯಲು ಯತ್ನಿಸಿ ವಿಫಲರಾಗಿದ್ದಾರೆ.

ಅದೇರೀತಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದ ಟೀ ಪಾಯಿಂಟ್ ಹಾಗೂ ಪಾನ್ ಶಾಪ್ ಬಾಗಿಲು ಮುರಿದು ಗಲ್ಲೆ ಮೀಟಿದ್ದಾರೆ. ಆದರೆ, ಅಲ್ಲಿ ಹಣ ದೊರೆತಿಲ್ಲ ಎಂದು ಟೀ ಪಾಯಿಂಟ್ ಯುವಕ ಮಾಹಿತಿ ನೀಡಿದ್ದಾನೆ.

ಪಕ್ಕದ ಖಾಸಗಿ ಆಸ್ಪತ್ರೆಯ ಬೀಗ ಮುರಿದು ಬಾಗಿಲು ಬೀಗ ತೆರೆದು ಒಳ ಪ್ರವೇಶಿಸಿದ ಕಳ್ಳರಿಗೆ ಏನು ದೊರೆತಿಲ್ಲ. ಜತೆಗೆ ಶ್ರೀಮಂಜುನಾಥ ಮೆಡಿಕಲ್ ಸ್ಟೋರ್ ಶಟರ್ಸ್ ಬೀಗ ಮುರಿಯಲು ಯತ್ನಿಸಿ ವಿಫಲರಾಗಿದ್ದಾರೆ. ಮೆಡಿಕಲ್ ಸ್ಟೋರ್ ಸಿಸಿ ಟಿವಿಯಲ್ಲಿ ಓರ್ವ ಸಂಚರಿಸಿರುವುದು ಸೆರೆಯಾಗಿದೆ.

ಅದೇರೀತಿ ಬಸ್ ನಿಲ್ದಾಣ ಮುಂಭಾಗದ ಸಾಯಿ ಕಾಂಪ್ಲೆಕ್ಸ್ ಮಳಿಗೆಗಳಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಪಟ್ಟಣದಲ್ಲಿ ಸರಣಿ ಕಳ್ಳತನ ಕುರಿತು ಮಾಹಿತಿ ಗೊತ್ತಾಗಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಕಳ್ಳತನ ಕುರಿತು ಯಾರಿಂದಲೂ ದೂರು ಬಂದಿಲ್ಲ ಎಂದು ಸಿಪಿಐ ಯಶವಂತ ಬಿಸನಹಳ್ಳಿ ಹಾಗೂ ಕ್ರೈಂ ವಿಭಾಗದ ಪಿಎಸ್’ಐ ಮಾನಪ್ಪ ವಾಲ್ಮೀಕಿ ಅವರು ತಿಳಿಸಿದ್ದಾರೆ.

ಪಟ್ಟಣದಲ್ಲಿ ಕೆಲ ತಿಂಗಳಿಂದ ಮಾರುತಿ ವೃತ್ತದಲ್ಲಿ, ಬಸವೇಶ್ವರ ವೃತ್ತದಲ್ಲಿ, ಗಾಂಧಿ ನಗರದಲ್ಲಿ, ಟೆಂಗುಂಟಿ ರಸ್ತೆ, ಶಾಖಾಪೂರ ರಸ್ತೆ, ವಿಷ್ಣುತೀರ್ಥ ನಗರ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನತೆ ಆತಂಕಕ್ಕೊಳಗಾಗಿದ್ದಾರೆ.

ಪಟ್ಟಣದ ಎಲ್ಲಾ ವೃತ್ತಗಳಲ್ಲಿ ಪುರಸಭೆಯ ಲಕ್ಷಾಂತರ ರೂ.ಗಳ ಅನುದಾನದಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳು ದುರಸ್ತಿಯಲ್ಲಿದ್ದು, ಇದರಿಂದ ಕಳ್ಳರ ಕೈಚಳಕಕ್ಕೆ ಮತ್ತಷ್ಟು ಅನುಕೂಲವಾಗಿದೆ. ತುಂಡಾಗಿ ಬಿದ್ದಿರುವ ಸಿಸಿ ಟಿವಿ ಕ್ಯಾಮೆರಾ ವಾಯರ್ ಸರಿಪಡಿಸಿ ಸಿಸಿಟಿವಿ ಪುನಶ್ಚೇತನಗೊಳಿಸಿ ಕಳ್ಳರ ಕಾಟ ತಡೆಗೆ ಯತ್ನಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.